ನವದೆಹಲಿ:ಸಿರಿಯಾ, ಟರ್ಕಿಯಲ್ಲಿ ಉಂಟಾದ ಪ್ರಬಲ ಭೂಕಂಪನದಿಂದಾಗಿ ಸಾವಿರಾರು ಜೀವಗಳು ಸಮಾಧಿಯಾಗಿದ್ದು, ಇಡೀ ವಿಶ್ವವೇ ಮಮ್ಮುಲು ಮರುಗುವಂತಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಕ್ಷಿಪ್ರ ನೆರವು ನೀಡಲು ಭಾರತ 48 ಜನರ ರಕ್ಷಣಾ, ವೈದ್ಯ ಪಡೆಯ ಮೊದಲ ತಂಡ ಅಲ್ಲಿಗೆ ತೆರಳಿದೆ. ಪ್ರಕೃತಿ ಮುನಿಸಿಗೆ ವಿನಾಶಕಾರಿ ಪ್ರಮಾಣದಲ್ಲಿ ಹಾನಿಯಾದ ದೇಶಗಳಿಗೆ ನೆರವು ನೀಡುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಭಾರತೀಯ ವಾಯುಪಡೆಯ ವಿಮಾನದಲ್ಲಿ ಪರಿಹಾರ ಸಾಮಗ್ರಿಗಳ ಜೊತೆಗೆ ಮೊದಲ ತಂಡ ಟರ್ಕಿಗೆ ಹಾರಿದೆ.
ಪುರುಷ ಮತ್ತು ಮಹಿಳಾ ಸಿಬ್ಬಂದಿ, ನುರಿತ ಶ್ವಾನದಳಗಳು, ವೈದ್ಯಕೀಯ ಸಾಮಗ್ರಿಗಳು, ಸುಧಾರಿತ ಕೊರೆಯುವ ಉಪಕರಣಗಳು ಸೇರಿದಂತೆ ಇತರ ಸಾಧನಗಳನ್ನು ಒಳಗೊಂಡಂತೆ ಪರಿಣಿತ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ(ಎನ್ಡಿಆರ್ಎಫ್) ತಂಡ ನೆರವಿಗೆ ತೆರಳಿತು. ಟರ್ಕಿ ಮತ್ತು ಸಿರಿಯಾಗೆ ಭಾರತದಿಂದ ಮಾನವೀಯ ನೆರವು ನೀಡಲು ವಿಪತ್ತು ಪರಿಹಾರ ತಂಡಗಳು ಸಜ್ಜಾಗಿವೆ.
NDRF ತಂಡ ಅಗತ್ಯ ಸಾಮಗ್ರಿಗಳ ಜೊತೆಗೆ ತೆರಳುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು, ಘಟನೆಗೆ ತೀವ್ರ ಸಂತಾಪ ಸೂಚಿಸಿ, ಭಾರತವು ಸಂತ್ರಸ್ತ ದೇಶಕ್ಕೆ ಸಕಲ ನೆರವು ನೀಡಲಿದೆ ಎಂದು ಘೋಷಿಸಿದ್ದರು.
ಭಾರತದಲ್ಲಿರುವ ಟರ್ಕಿಯ ರಾಯಭಾರಿ ಫಿರತ್ ಸುನೆಲ್ ಅವರು ಭಾರತ ಸರ್ಕಾರದ ನೆರವಿಗೆ ಕೃತಜ್ಞತೆ ಸಲ್ಲಿಸಿದರು. "ಅಗತ್ಯಕ್ಕೆ ಬೇಕಾಗುವವ ನಿಜವಾದ ಸ್ನೇಹಿತ" ಎಂದು ಹೇಳಿದರು. ಇದಕ್ಕಾಗಿ ಅವರು ಟರ್ಕಿಶ್ ಭಾಷೆಯಲ್ಲಿನ ಗಾದೆಯನ್ನೂ ಉಲ್ಲೇಖಿಸಿದ್ದಾರೆ.