ಕರ್ನಾಟಕ

karnataka

ETV Bharat / bharat

'ದೇಶದಲ್ಲಿ ಕೊರೊನಾಗೆ 41 ಲಕ್ಷ ಜನ ಸತ್ತಿಲ್ಲ': ಲ್ಯಾನ್ಸೆಟ್​ ಜರ್ನಲ್​ ವರದಿ ಅಲ್ಲಗಳೆದ ಭಾರತ - ಲ್ಯಾನ್ಸಟ್​ ವರದಿ ಸುಳ್ಳೆಂದ ಭಾರತ

ಲ್ಯಾನ್ಸೆಟ್​ ಜರ್ನಲ್​ನ ಕೊರೊನಾ ಸಾವಿನ ಅಂದಾಜು ವರದಿಯನ್ನು ಭಾರತ ಸುಳ್ಳು ಎಂದಿದೆ. ಇದು ಕೇವಲ ಅಂಕಿ-ಅಂಶಗಳ ಲೆಕ್ಕಾಚಾರದ ಮೇಲೆ ಈ ವರದಿ ನೀಡಲಾಗಿದೆ. ಕೊರೊನಾ ನಿರ್ವಹಣಾ ಕ್ರಮಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.

lancet-journal
ಲ್ಯಾನ್ಸೆಟ್​ ಜರ್ನಲ್​

By

Published : Mar 11, 2022, 7:43 PM IST

ನವದೆಹಲಿ:ಕೊರೊನಾದಿಂದ ವಿಶ್ವದಲ್ಲಿ 18.2 (1ಕೋಟಿ 80 ಲಕ್ಷಕ್ಕೂ ಅಧಿಕ) ಮಿಲಿಯನ್​ ಮತ್ತು ಭಾರತದಲ್ಲಿ 41 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಭಾರತ ತಳ್ಳಿಹಾಕಿದೆ. ಅಲ್ಲದೇ, ಈ ವರದಿ 'ಊಹಾತ್ಮಕ' ಮತ್ತು 'ತಪ್ಪು ಮಾಹಿತಿ' ನೀಡಿದೆ ಎಂದು ಟೀಕಿಸಿದೆ.

ಅವೈಜ್ಞಾನಿಕ, ಕೇವಲ ಗಣಿತದ ಲೆಕ್ಕಾಚಾರದ ಆಧಾರದ ಮೇಲೆ ಈ ವರದಿಯನ್ನು ರೂಪಿಸಲಾಗಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೊನಾದಿಂದಾದ ಮರಣಗಳನ್ನು ನಿಖರವಾಗಿ ಅಂದಾಜಿಸಲಾಗಲ್ಲ. ಈ ವರದಿಯ ಲೆಕ್ಕಾಚಾರ ಕೇವಲ ಒಂದು ಊಹೆಯಾಗಿದೆ. ಇದು ಜನರಿಗೆ ತಪ್ಪು ಮಾಹಿತಿ ನೀಡಿದೆ ಎಂದು ವರದಿಯಲ್ಲಿನ ಅಂಶಗಳನ್ನು ಸುಳ್ಳು ಎಂದಿದೆ.

ಲ್ಯಾನ್ಸೆಟ್​ ಎಂಬ ಜರ್ನಲ್​ ಇತ್ತೀಚೇಗೆ ವಿಶ್ವದಲ್ಲಿ 18.2 ಮಿಲಿಯನ್​ ಜನರು ಕೊರೊನಾಗೆ ಬಲಿಯಾಗಿದ್ದರೆ, ಭಾರತದಲ್ಲಿ 41 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಅಂದಾಜು ವರದಿಯನ್ನು ನೀಡಿತ್ತು. ಆದರೆ, 2020 ರ ಜನವರಿ 1 ರಿಂದ 2021 ಡಿಸೆಂಬರ್​ 31ರ ವರೆಗೂ ಪ್ರಪಂಚದಾದ್ಯಂತ 53 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಹೇಳಿದೆ.

ನೈಜ ಮಾಹಿತಿ ಪಡೆದಿಲ್ಲ:ಗಣಿತದ ಲೆಕ್ಕಾಚಾರಗಳ ಆಧಾರದ ಮೇಲೆ ವಿಶ್ವದಲ್ಲಿ ಘಟಿಸಿದ ಕೊರೊನಾ ಸಾವನ್ನು ಅಂದಾಜಿಸಲಾಗದು. ನೈಜ ಮಾಹಿತಿಯನ್ನು ಪಡೆದುಕೊಳ್ಳದೇ, ಪ್ರಸ್ತುತ ಸನ್ನಿವೇಶಗಳನ್ನು ಅಧ್ಯಯನ ಮಾಡದೇ ಈ ವರದಿಯನ್ನು ರೂಪಿಸಲಾಗಿದೆ ಎಂದು ಭಾರತ ಆರೋಗ್ಯ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಇಂತಹ ತುಲನಾತ್ಮಕ ಅಧ್ಯಯನಗಳು ಒಂದು ಸಣ್ಣ ಮಾದರಿಯನ್ನು ತೆಗೆದುಕೊಂಡು ಇಡೀ ಜನಸಂಖ್ಯೆಗೆ ಹೋಲಿಸಲಾಗಿರುತ್ತದೆ. ಇಂತಹ ಪ್ರಯೋಗಗಳು ಒಂದು ದೇಶ, ಪ್ರದೇಶದಲ್ಲಿ ಮಾತ್ರ ಮಾಡಬಹುದು. ಈ ರೀತಿಯ ಲೆಕ್ಕಚಾರಗಳು ವೈವಿಧ್ಯಮಯ ದೇಶಗಳನ್ನು ಒಗ್ಗೂಡಿಸಿ ನಿಖರ ಫಲಿತಾಂಶವನ್ನು ನೀಡಲು ಅಸಾಧ್ಯ ಎಂದು ಹೇಳಿದೆ.

ವಿಮರ್ಶೆ, ಪತ್ರಿಕಾ ವರದಿ ಮೇಲೆ ಲೆಕ್ಕಾಚಾರ:ಈ ಅಧ್ಯಯನ ಬಳಸಿದ ಅಂಕಿ- ಅಂಶಗಳು ಪತ್ರಿಕೆಗಳಲ್ಲಿ ಬಿತ್ತರವಾದ ವರದಿಗಳು, ವಿಮರ್ಶೆಗಳಿಂದ ತೆಗೆದುಕೊಳ್ಳಲಾಗಿದೆ. ಅದರಂತೆಯೇ ಮರಣ ಪ್ರಮಾಣವನ್ನು ಅಂದಾಜಿಸಿದೆ. ಈ ಲೆಕ್ಕಾಚಾರ ದೇಶದ ನಿಜವಾದ ಲೆಕ್ಕವನ್ನು ತಪ್ಪಿಸಿ, ಮರಣ ಭಯವನ್ನು ಇನ್ನಷ್ಟು ಉದ್ದೀಪಿಸುತ್ತದೆ. ಇದು ಕಳವಳಕಾರಿ ವಿಷಯ ಎಂದಿದೆ.

ಕೊರೊನಾ ಅಲೆಗಳು ಆಯಾ ದೇಶಗಳ ಭೌಗೋಳಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಪರಿಣಾಮ ಬೀರಿದೆ. ಭಾರತದಲ್ಲಿ 2021 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 40 ಪಟ್ಟು ಹೆಚ್ಚು ಸಾವುಗಳು ಸಂಭವಿಸಿವೆ ಎಂದು ವರದಿ ಅಂದಾಜಿಸಿದೆ. ಕೊರೊನಾ ಅತ್ಯಧಿಕ ಪ್ರಮಾಣದಲ್ಲಿ ಹಬ್ಬಿದಾಗ ವರದಿಯಾದ ಸಾವುಗಳಿಗೆ, ಕೊರೊನಾ ತಹಬದಿಗೆ ಬಂದಾಗಲೂ ಅದೇ ಲೆಕ್ಕಾಚಾರ ಹಾಕಲಾಗಿದೆ. ಇದು ವರದಿಯ ಬಹುದೊಡ್ಡ ಲೋಪ ಎಂದು ಟೀಕಿಸಿದೆ.

ಸರ್ಕಾರ ಕೊರೊನಾ ಕಡಿವಾಣಕ್ಕೆ ಹಾಕಲಾದ ಲಾಕ್‌ಡೌನ್, ಕಂಟೈನ್‌ಮೆಂಟ್ ವಲಯಗಳ ಗುರುತಿಸುವಿಕೆ, ಪರೀಕ್ಷೆ ಮತ್ತು ಸಂಪರ್ಕ ಪತ್ತೆ ಹಚ್ಚುವಿಕೆ, ನಿರ್ಬಂಧಗಳು ಮತ್ತು ವಿಶ್ವದಲ್ಲಿಯೇ ಅತಿದೊಡ್ಡ ಲಸಿಕಾ ಅಭಿಯಾನದಂತಹ ನಿರ್ವಹಣಾ ಕ್ರಮಗಳನ್ನು ವರದಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:ಭಾರತದಲ್ಲಿ ಕೋವಿಡ್‌ನಿಂದ 41 ಲಕ್ಷ ಜನರ ಸಾವು! ಲ್ಯಾನ್ಸೆಟ್‌ ವರದಿಯಿಂದ ಅಚ್ಚರಿಯ ಮಾಹಿತಿ

ABOUT THE AUTHOR

...view details