ನವದೆಹಲಿ:ದೇಶದಲ್ಲಿ ಹೊಸದಾಗಿ ಕಾಣಿಸಿಕೊಳ್ಳುವ ಕೊರೊನಾ ಸೋಂಕಿತರ ಸಂಖ್ಯೆ ಕೆಲವು ದಿನಗಳಿಂದ ಎರಡೂವರೆ ಲಕ್ಷದ ಆಸುಪಾಸಿನಲ್ಲಿಯೇ ಇತ್ತು. ಆದರೆ ಇಂದು ಮೂರು ಲಕ್ಷವನ್ನೂ ದಾಟಿ ಮುನ್ನುಗ್ಗಿದೆ. ಕಳೆದ 24 ಗಂಟೆಯಲ್ಲಿ 3,17,532 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಮಾಹಿತಿ ನೀಡಿದೆ.
ಹಿಂದಿನ ದಿನಕ್ಕೆ ಹೋಲಿಸಿದರೆ, ಕಳೆದ 24 ಗಂಟೆಗಳಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಒಂದು ದಿನದಲ್ಲಿ 491 ಮಂದಿ ಕೋವಿಡ್ನಿಂದ ಸಾವನ್ನಪ್ಪಿದ್ದು, 2,23,990 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 9,287ಕ್ಕೆ ಏರಿಕೆ ಕಂಡಿದೆ. ಇನ್ನು ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 16.41ರಷ್ಟಿದೆ.
ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್:ಈವರೆಗೆ ಸುಮಾರು 70,93,56,830 ಕೋಟಿ ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಸೋಮವಾರ ಒಂದೇ ದಿನ 19,35,180 ಮಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾಹಿತಿ ನೀಡಿದೆ. ಈವರೆಗೆ ಸುಮಾರು 159.54 ಕೋಟಿ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ. ಸೋಮವಾರ ಒಂದೇ ದಿನದಲ್ಲಿ 62 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.