ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 3,275 ಕೋವಿಡ್-19 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 55 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರಕ್ಕೆ ಹೋಲಿಸಿದರೆ 200 ಸೋಂಕಿತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಕೆಲವು ದಿನಗಳ ಅಂಕಿಅಂಶಗಳನ್ನು ಗಮನಿಸಿದರೆ ಕೋವಿಡ್ ಪ್ರಕರಣಗಳಲ್ಲಿ ಏರಿಳಿತವಾಗುತ್ತಿರುವುದು ಗೋಚರಿಸುತ್ತದೆ.
ಹೀಗಾಗಿ, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವುದು ಅತೀ ಅಗತ್ಯ. ವ್ಯಾಕ್ಸಿನ್ ಹಾಕಿಸಿಕೊಳ್ಳುವುದು, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ, ದೈಹಿಕ ಶುಚಿತ್ವ ಕಾಪಾಡುವುದು ಹಾಗು ಪರಸ್ಪರ 6 ಅಡಿ ಅಂತರ ಕಾಯ್ದುಕೊಳ್ಳುವುದನ್ನು ಅಲಕ್ಷಿಸುವಂತಿಲ್ಲ.
ಹೊಸ ರೂಪಾಂತರಿಗಳಿಗೂ ವ್ಯಾಕ್ಸಿನ್ ರಾಮಬಾಣವೇ?:ಹೌದು, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಹೇಳುವಂತೆ, ಕೋವಿಡ್-19ನ ಹೊಸ ತಳಿಗಳಿಗೂ ಈಗಿನ ವ್ಯಾಕ್ಸಿನ್ ದಿವ್ಯೌಷಧವೇ ಆಗಿದೆ. ಹಾಗಾಗಿ, ವ್ಯಾಕ್ಸಿನ್ ಹಾಕಿಸಿಕೊಳ್ಳುವುದನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ದಕ್ಷಿಣ ಆಫ್ರಿಕಾ ಮತ್ತು ಅಮೆರಿಕದಲ್ಲಿ ಹೊಸ ತಳಿಗಳು ಪತ್ತೆಯಾಗುತ್ತಿದ್ದು, ವ್ಯಾಕ್ಸಿನ್ ಬಗೆಗಿನ ಅನುಮಾನಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಸಂಶೋಧಕರು ಹೋಗಲಾಡಿಸಿದ್ದಾರೆ.
ಡಬಲ್ ಮಾಸ್ಕ್ ಬಳಕೆ ಹಾನಿಕಾರಕವೇ?:ಇನ್ನೊಂದೆಡೆ,ಡಬಲ್ ಮಾಸ್ಕ್ ಕೋವಿಡ್‌ನಿಂದ ಪರಿಹಾರ ನೀಡುವುದಿಲ್ಲ. ಇದಕ್ಕೆ ಬದಲಾಗಿ ಸೋಂಕು ಹರಡುವ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಅಮೆರಿಕದಲ್ಲಿ ಸಂಶೋಧಕರು ಹೇಳಿದ್ದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಫ್ರಾನ್ಸ್ ಭೇಟಿ: ಮ್ಯಾಕ್ರೋನ್ ಜೊತೆ ಉಕ್ರೇನ್ ಸಂಘರ್ಷ, ಆಫ್ಘನ್ ಬಿಕ್ಕಟ್ಟು ಚರ್ಚೆ