ನವದೆಹಲಿ: ಭಾರತದಲ್ಲಿ ಒಂದೇ ದಿನದಲ್ಲಿ 6,395 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಇದರಿಂದ ದೇಶದ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 4,44,78,636 ಕ್ಕೆ ಏರಿಕೆಯಾಗಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 50,342 ಕ್ಕೆ ಇಳಿದಿದೆ ಎಂದು ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
24 ಗಂಟೆಗಳಲ್ಲಿ ಕೋವಿಡ್ನಿಂದ 33 ಜನರ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 5,28,090 ಕ್ಕೆ ಏರಿದೆ. ಇದರಲ್ಲಿ 14 ಸಾವುಗಳು ಕೇರಳದಲ್ಲಿ ಸಂಭವಿಸಿವೆ ಎಂದು ಇಂದು ನವೀಕರಿಸಲಾದ ಮಾಹಿತಿಯಿಂದ ತಿಳಿದು ಬಂದಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಸೋಂಕಿನ ಶೇ 0.11 ರಷ್ಟಿವೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರವು ಶೇ 98.70 ಕ್ಕೆ ಹೆಚ್ಚಾಗಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ 252 ಪ್ರಕರಣಗಳ ಇಳಿಕೆ ದಾಖಲಾಗಿದೆ. ದೈನಂದಿನ ಪಾಸಿಟಿವಿಟಿ ರೇಟ್ ಶೇ 1.96 ಮತ್ತು ಸಾಪ್ತಾಹಿಕ ಪಾಸಿಟಿವಿಟಿ ರೇಟ್ ಶೇ 1.88 ದಾಖಲಾಗಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,39,00,204 ಕ್ಕೆ ಏರಿದೆ. ಪ್ರಕರಣಗಳಲ್ಲಿ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ.
ಭಾರತದ ಕೋವಿಡ್-19 ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿಯನ್ನು ದಾಟಿತ್ತು. ಅದೇ ವರ್ಷ ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿತ್ತು. ಕೋವಿಡ್ ಪ್ರಕರಣಗಳ ಸಂಖ್ಯೆ ಈ ವರ್ಷದ ಜನವರಿ 25 ರಂದು ನಾಲ್ಕು ಕೋಟಿ ದಾಟಿತ್ತು.