ನವದೆಹಲಿ: ದೇಶದಲ್ಲಿ ಕೋವಿಡ್ 19 ವೈರಸ್ ಆತಂಕ ಮತ್ತೆ ಹೆಚ್ಚಾಗುತ್ತಿದೆ. ಕಳೆದೊಂದು ದಿನದಲ್ಲಿ 3,824 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 18,389 ಕ್ಕೆ ಏರಿಕೆಯಾಗಿದೆ. ಇದು ಕಳೆದ 184 ದಿನಗಳಲ್ಲಿ ದಾಖಲಾದ ಅತಿ ಹೆಚ್ಚು ಸೋಂಕಿತರ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 5,30,881 ಕ್ಕೆ ತಲುಪಿದೆ. ದೆಹಲಿ, ಹರಿಯಾಣ ಮತ್ತು ರಾಜಸ್ಥಾನದಿಂದ ತಲಾ ಒಬ್ಬರು ಮತ್ತು ಕೇರಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಕಳೆದೊಂದು ದಿನದಲ್ಲಿ ಪತ್ತೆಯಾದ ಸೋಂಕಿತರು ಸೇರಿದಂತೆ ಇದುವರೆಗೆ 4.47 ಕೋಟಿಗೆ (4,47,22,605) ಮಂದಿಗೆ ಸೋಂಕು ತಗುಲಿದೆ.
ಇದನ್ನೂ ಓದಿ :ಆರೋಗ್ಯ ಇಲಾಖೆಯಿಂದ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟ
ಸದ್ಯಕ್ಕೆ ದೈನಂದಿನ ಪಾಸಿಟಿವಿಟಿ ದರ 2.87 ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ 2.24 ಇದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ 98.77 ಪ್ರತಿಶತದಷ್ಟು ದಾಖಲಾಗಿದೆ. ಸಾವಿನ ಪ್ರಮಾಣ ಶೇ 1.19 ರಷ್ಟಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,41,73,335ಕ್ಕೆ ತಲುಪಿದೆ. ಕೇಂದ್ರ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ರಾಷ್ಟ್ರವ್ಯಾಪಿ ಕೋವಿಡ್ ಲಸಿಕಾ ಅಭಿಯಾನದಡಿಯಲ್ಲಿ ಇದುವರೆಗೆ 220.66 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ :ಕಮಾಂಡರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ನೌಕಾಪಡೆ ಮುಖ್ಯಸ್ಥರಿಗೆ ಕೋವಿಡ್ ಸೋಂಕು ಪತ್ತೆ
ಹೊಸ ಮಾರ್ಗಸೂಚಿ ಪ್ರಕಟ: ಇನ್ನು ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಇನ್ನೊಂದೆಡೆ, ಆರೋಗ್ಯ ಇಲಾಖೆ ದೇಶಾದ್ಯಂತ ಕೋವಿಡ್ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ, ಮಾರ್ಚ್ 31 ರಂದು ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಇದರಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಗೆ ಕಡ್ಡಾಯವಾಗಿ ಬೂಸ್ಟರ್ ಡೋಸ್ ನೀಡಬೇಕು. ಮತ್ತು ಯಾವುದೇ ಚುನಾವಣಾ ರ್‍ಯಾಲಿ ಗಳಲ್ಲಿ ಸೋಂಕು ಹರಡಿದರೆ ಅದರ ಹೊಣೆಯನ್ನು ಆಯೋಜಿಸುವ ರಾಜಕೀಯ ಪಕ್ಷಗಳೇ ಹೊರಬೇಕು ಎಂದು ತಿಳಿಸಿದೆ.
ಇದನ್ನೂ ಓದಿ :ಗರ್ಭಾವಸ್ಥೆಯಲ್ಲಿ ಕೋವಿಡ್ ಮಕ್ಕಳಲ್ಲಿ ಸ್ಥೂಲಕಾಯದ ಅಪಾಯ ಹೆಚ್ಚಿಸುತ್ತೆ: ಅಧ್ಯಯನ
ಮತದಾನ ನಡೆಯುವ ದಿನದಂದು ಮತಗಟ್ಟೆಗಳಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕು. ಹಾಗೂ ಮತ ಹಾಕಲು ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ನಿಯಮಾನುಸಾರ ಟೋಕನ್ ವಿತರಿಸಬೇಕು. ಸಾಮಾಜಿಕ ಅಂತರ ಕಾಪಾಡಲು ಮತಗಟ್ಟೆ ಹಾಗೂ ಹೊರ ಭಾಗದಲ್ಲಿ ಮಾರ್ಕ್ ಮಾಡಬೇಕು. ಎಲ್ಲಾ ಮತಗಟ್ಟೆಗಳ ಎದುರು ಕೋವಿಡ್ 19 ಜಾಗೃತಿ ಕುರಿತಾದ ಪೋಸ್ಟರ್ ಅಂಟಿಸಬೇಕು. ಮತದಾನದ ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಮೀಸಲಿಡಬೇಕು ಎಂದು ತಿಳಿಸಿದೆ.
ಇದನ್ನೂ ಓದಿ :10 ಸೆಕೆಂಡುಗಳಲ್ಲಿ ಕೋವಿಡ್ & ಫ್ಲು ಪತ್ತೆ ಮಾಡುವ ಸೆನ್ಸರ್ ಆವಿಷ್ಕಾರ