ನವದೆಹಲಿ : ಭಾರತದ ಜಿಡಿಪಿ ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಶೇ 7.8 ರಷ್ಟು ಪ್ರಗತಿ ಸಾಧಿಸಿದೆ ಎಂದು ರಾಷ್ಟ್ರೀಯ ಅಂಕಿ- ಸಂಖ್ಯೆ ಕಚೇರಿ ಈ ಮಾಹಿತಿ ನೀಡಿದೆ. ಭಾರತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ.
ಒಂದು ವರ್ಷದಲ್ಲಿ ಭಾರತದಲ್ಲಿ ಅತ್ಯಂತ ವೇಗದ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಇಲಾಖೆ ಅಂಕಿ- ಅಂಶಗಳಿಂದ ತಿಳಿದು ಬಂದಿದೆ. ಆರ್ಥಿಕ ತಜ್ಞರು ಅಂದಾಜಿಸಿದಂತೆ GDP ದರ ಹೆಚ್ಚಾಗಿದೆ.
ಇನ್ನು ಭಾರತದ ಎಂಟು ಪ್ರಮುಖ ಕೈಗಾರಿಕೆಗಳ ಸಂಯೋಜಿತ ಸೂಚ್ಯಂಕವು (ICI) ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜುಲೈನಲ್ಲಿ ಶೇಕಡಾ 8 ರಷ್ಟು ಹೆಚ್ಚಳವಾಗಿದೆ. ಕಲ್ಲಿದ್ದಲು, ಉಕ್ಕು, ನೈಸರ್ಗಿಕ ಅನಿಲ, ಸಿಮೆಂಟ್, ವಿದ್ಯುತ್, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು ಮತ್ತು ಕಚ್ಚಾ ತೈಲದ ಉತ್ಪಾದನೆಯು 2023 ರಲ್ಲಿ ಅಧಿಕವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.
ಭಾರತದ ಸಂಯೋಜಿತ ಸೂಚ್ಯಂಕವು ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಉತ್ಪನ್ನಗಳು, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಎಂಬ ಎಂಟು ಪ್ರಮುಖ ಕೈಗಾರಿಕೆಗಳ ಉತ್ಪಾದನೆಯ ವೈಯಕ್ತಿಕ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಎಂಟು ವಲಯಗಳ ಬೆಳವಣಿಗೆ ಪ್ರಮಾಣ ಶೇ 4.8ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಶೇ 3.2ರಷ್ಟು ಹೆಚ್ಚಾಗಿದೆ. ಈ ವರ್ಷದ ಜೂನ್‌ನಲ್ಲಿ ಆಗಿದ್ದ ಶೇ 8.3ರಷ್ಟು ಬೆಳವಣಿಗೆ ಹೋಲಿಸಿದರೆ ಜುಲೈನಲ್ಲಿ ಸ್ವಲ್ಪ ಇಳಿಕೆ ಕಂಡಿದೆ.
ಏಪ್ರಿಲ್-ಜುಲೈ ಅವಧಿಗೆ ಕಲ್ಲಿದ್ದಲು ಉತ್ಪಾದನೆಯು ಶೇಕಡಾ 6.4 ಬೆಳವಣಿಗೆಯನ್ನು ದಾಖಲಿಸಿದೆ. ಇದು ಕಳೆದ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಶೇಕಡಾ 11.5 ಇದ್ದು, ಇಳಿಕೆ ಕಂಡಿದೆ. ಎಂಟು ಪ್ರಮುಖ ಕೈಗಾರಿಕೆಗಳು ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ (ಐಐಪಿ) ಶೇಕಡಾ 40.27 ರಷ್ಟು ಪಾಲು ಹೊಂದಿವೆ ಎಂದು ಸಚಿವಾಲಯ ಹೇಳಿದೆ. ಕಳೆದ ವರ್ಷದ ಅವಧಿಗೆ ಅನುಗುಣವಾಗಿ ಹೋಲಿಸಿದರೆ 2023-24ರ ಏಪ್ರಿಲ್‌ನಿಂದ ಜುಲೈವರೆಗೆ ICI ಯ ಸಂಚಿತ ಬೆಳವಣಿಗೆಯ ದರವು 6.4 ಶೇಕಡಾ (ತಾತ್ಕಾಲಿಕ) ಎಂದು ವರದಿ ಮಾಡಲಾಗಿದೆ.
ಸಚಿವಾಲಯವು ಬಿಡುಗಡೆ ಮಾಡಿದ ಆಯಾ ವಲಯಗಳ ಉತ್ಪಾದನೆ ಇಂತಿದೆ :
- ಕಲ್ಲಿದ್ದಲು ಉತ್ಪಾದನೆಯು ಜುಲೈ 2022 ಕ್ಕಿಂತ ಜುಲೈ 2023 ರಲ್ಲಿ 14.9 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಅವಧಿಗೆ ಅನುಗುಣವಾಗಿ ಸಂಚಿತ ಸೂಚ್ಯಂಕವು ಏಪ್ರಿಲ್‌ನಿಂದ ಜುಲೈ 2023-24 ರವರೆಗೆ ಶೇಕಡಾ 10.1 ಹೆಚ್ಚಾಗಿದೆ.
- ಕಚ್ಚಾ ತೈಲವು 2022 ಕ್ಕಿಂತ ಜುಲೈ 2023 ರಲ್ಲಿ ಕಚ್ಚಾ ತೈಲ ಉತ್ಪಾದನೆಯು 2.1 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಅವಧಿಗೆ ಅನುಗುಣವಾಗಿ ಹೋಲಿಸಿದರೆ ಸಂಚಿತ ಸೂಚ್ಯಂಕವು 2023 ರ ಏಪ್ರಿಲ್‌ನಿಂದ ಜುಲೈ ವರೆಗೆ ಶೇಕಡಾ 1.0 ಕಡಿಮೆಯಾಗಿದೆ.
- ನೈಸರ್ಗಿಕ ಅನಿಲ ಉತ್ಪಾದನೆಯು ಜುಲೈ 2022 ಕ್ಕಿಂತ ಜುಲೈ 2023 ರಲ್ಲಿ ಶೇಕಡಾ 8.9 ರಷ್ಟು ಹೆಚ್ಚಾಗಿದೆ. ಇದರ ಸಂಚಿತ ಸೂಚ್ಯಂಕವು ಹಿಂದಿನ ವರ್ಷದ ಅನುಗುಣವಾದ ಅವಧಿಗೆ ಹೋಲಿಸಿದ್ರೆ ಏಪ್ರಿಲ್‌ನಿಂದ ಜುಲೈ 2023-24 ರ ಅವಧಿಯಲ್ಲಿ 2.3 ಶೇಕಡಾ ಹೆಚ್ಚಾಗಿದೆ.
- ಪೆಟ್ರೋಲಿಯಂ ರಿಫೈನರಿ ಉತ್ಪಾದನೆಯು ಜುಲೈ 2022 ಕ್ಕಿಂತ ಜುಲೈ 2023 ರಲ್ಲಿ ಶೇಕಡಾ 3.6 ರಷ್ಟು ಹೆಚ್ಚಾಗಿದೆ. ಅದರ ಸಂಚಿತ ಸೂಚ್ಯಂಕವು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ 2023-24 ರ ಏಪ್ರಿಲ್‌ನಿಂದ ಜುಲೈ ವರೆಗೆ ಶೇಕಡಾ 2.3 ರಷ್ಟು ಹೆಚ್ಚಾಗಿದೆ ಎಂದು ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
- ರಸಗೊಬ್ಬರ ಉತ್ಪಾದನೆ ಸಹ ಜುಲೈ 2023 ರಲ್ಲಿ ಶೇಕಡಾ 3.3 ರಷ್ಟು ಹೆಚ್ಚಾಗಿದೆ. ಸಂಚಿತ ಸೂಚ್ಯಂಕವನ್ನು ಹಿಂದಿನ ವರ್ಷದ ಅವಧಿಗೆ ಅನುಗುಣವಾಗಿ ಹೋಲಿಸಿದರೆ 2023-24 ರ ಏಪ್ರಿಲ್‌ನಿಂದ ಜುಲೈನಲ್ಲಿ ಶೇಕಡಾ 9.1 ರಷ್ಟು ಹೆಚ್ಚಾಗಿದೆ.
- ಉಕ್ಕಿನ ಉತ್ಪಾದನೆಯು ಜುಲೈ 2022 ಕ್ಕಿಂತ ಜುಲೈ 2023 ರಲ್ಲಿ ಶೇಕಡಾ 13.5 ರಷ್ಟು ಹೆಚ್ಚಾಗಿದೆ. ಅದರ ಸಂಚಿತ ಸೂಚ್ಯಂಕವು ಹಿಂದಿನ ವರ್ಷದ ಅನುಗುಣವಾದ ಅವಧಿಗೆ ಹೋಲಿಸಿದರೆ ಏಪ್ರಿಲ್‌ನಿಂದ ಜುಲೈ 2023-24 ರ ಅವಧಿಯಲ್ಲಿ 15.3 ಶೇಕಡಾ ಹೆಚ್ಚಾಗಿದೆ.
- ಜುಲೈ 2022 ಕ್ಕಿಂತ ಜುಲೈ 2023 ರಲ್ಲಿ ಸಿಮೆಂಟ್ ಉತ್ಪಾದನೆಯು 7.1 ರಷ್ಟು ಹೆಚ್ಚಾಗಿದೆ. ಅದರ ಸಂಚಿತ ಸೂಚ್ಯಂಕವು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಏಪ್ರಿಲ್‌ನಿಂದ ಜುಲೈ 2023-24 ರಲ್ಲಿ 11.2 ಶೇಕಡಾ ಹೆಚ್ಚಾಗಿದೆ.
- ಹಾಗೆಯೇ, ಜುಲೈ 2022 ಕ್ಕಿಂತ ಜುಲೈ 2023 ರಲ್ಲಿ ವಿದ್ಯುತ್ ಉತ್ಪಾದನೆ ಸಹ 6.9 ರಷ್ಟು ಹೆಚ್ಚಾಗಿದೆ. 2023-24 ರ ಏಪ್ರಿಲ್‌ನಿಂದ ಜುಲೈ 24 ರ ಅವಧಿಯಲ್ಲಿ 2.7 ಶೇಕಡಾ ಹೆಚ್ಚಾಗಿದೆ. (ಎಎನ್ಐ).
ಇದನ್ನೂ ಓದಿ :ಕರುನಾಡಿಗೆ ಬರದ ತೂಗುಗತ್ತಿ: ವಿದ್ಯುತ್ ಬಳಕೆ ಗಣನೀಯ ಏರಿಕೆ, ಉತ್ಪಾದನೆ ಕುಸಿತ...