ನವದೆಹಲಿ :ಭಾರತ ಮತ್ತು ಚೀನಾ ನಡುವಿನ ಸಂಬಂಧ ಸದ್ಯಕ್ಕೆ ಇನ್ನೂ ಸಹಜವಾಗಿಲ್ಲ. 1993-96ರ ಒಪ್ಪಂದಗಳಿಗೆ ವಿರುದ್ಧವಾಗಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದೆ. ಕೆಲ ಸಂಘರ್ಷದ ಸ್ಥಳಗಳಲ್ಲಿ ಪರಿಹಾರ ಕಂಡುಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ನವದೆಹಲಿಯ ಹೈದ್ರಾಬಾದ್ ಭವನದಲ್ಲಿ ಶುಕ್ರವಾರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಮಹತ್ವದ ಸಭೆ ನಡೆಯಿತು. ಉಭಯ ನಿಯೋಗಗಳ ಮಧ್ಯೆ ಸುಮಾರು ಮೂರು ಗಂಟೆಗಳಷ್ಟು ದೀರ್ಘ ಕಾಲದ ಮಾತುಕತೆ ಜರುಗಿತು. ಬಳಿಕ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಸಚಿವ ಜೈಶಂಕರ್ ಮಾತನಾಡಿದರು.
ಎರಡು ರಾಷ್ಟ್ರಗಳ ನಡುವೆ ಮುಕ್ತ, ಪ್ರಾಮಾಣಿಕ ವಾತಾವರಣದಲ್ಲಿ ಚರ್ಚೆ ನಡೆದಿದೆ. ವಿಶಾಲ ಮತ್ತು ವಸ್ತುನಿಷ್ಠ ಕಾರ್ಯಸೂಚಿ ಮೇಲೆ ಸಮಾಲೋಚನೆ ನಡೆಸಿದ್ದೇವೆ. ಗಡಿಯಲ್ಲಿ ಸಹಜತೆ ಮರು ಸ್ಥಾಪಿಸಬೇಕಿದ್ದರೆ, ಶಾಂತಿ ಮತ್ತು ನೆಮ್ಮದಿಯ ವಾತಾವರಣದ ಮರು ಸ್ಥಾಪನೆ ಅಗತ್ಯವಿದೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ಈವರೆಗೆ 15 ಸುತ್ತಿನ ಮಾತುಕತೆಗಳು ನಡೆದಿವೆ ಎಂದರು.