ನವದೆಹಲಿ:ಪ್ಯಾಂಗಾಂಗ್ ಸರೋವರ ತೀರಗಳ ಬಳಿಕ ಭಾರತ ಮತ್ತು ಚೀನಾ ದೇಶಗಳು ಪೂರ್ವ ಲಡಾಖ್‌ನ ಗೋಗ್ರಾ ಪ್ರದೇಶದಿಂದ ತಮ್ಮ ಸೇನೆಗಳನ್ನು ಹಿಂಪಡೆಯಲು ಒಪ್ಪಿಕೊಂಡಿವೆ. ಈ ಮೂಲಕ ಗೋಗ್ರಾ ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಮರುಸ್ಥಾಪಿಸಲಾಗುತ್ತಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಇತ್ತೀಚೆಗೆ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ 11ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಬಳಿಕ ಈ ನಿರ್ಧಾರವನ್ನು ಭಾರತ - ಚೀನಾ ತೆಗೆದುಕೊಂಡಿವೆ. ಈಗಾಗಲೇ ಗೋಗ್ರಾ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದ ಎಲ್ಲ ತಾತ್ಕಾಲಿಕ ಶಿಬಿರಗಳನ್ನು ತೆರವುಗೊಳಿಸಲಾಗಿದ್ದು, ಸಂಬಂಧಿತ ಮೂಲ ಸೌಕರ್ಯಗಳನ್ನು ಎರಡೂ ಕಡೆಯಿಂದ ಕೆಡವಲಾಗಿದೆ. ಹಂತ ಹಂತವಾಗಿ ಸಮನ್ವಯದಿಂದ ಮತ್ತು ಪರಿಶೀಲನೆ ನಡೆಸಿ ಗೋಗ್ರಾದಲ್ಲಿ ಸೇನೆ ನಿಯೋಜಿಸುವುದನ್ನು ನಿಲ್ಲಿಸುತ್ತೇವೆ ಎಂದು ಸೇನೆ ತಿಳಿಸಿದೆ.