ನವದೆಹಲಿ:ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆ ಜೊತೆಗೆ ಗಣರಾಜ್ಯೋತ್ಸವ ಕೂಡಾ ಬಂದಿದ್ದು, ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಮ್ಮ ದೇಶವು ಸೇನಾ ಶಕ್ತಿ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಅನೇಕ ವಿಶಿಷ್ಟತೆಗಳನ್ನು ಪ್ರದರ್ಶಿಸಲಾಗುತ್ತಿದೆ.
ಸ್ವಾತಂತ್ರ್ಯ ಪಡೆದು 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಎಲ್ಲಾ ಆಚರಣೆಗಳು ವಿಶೇಷವಾಗಿವೆ. ಈ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯವು ರಾಜ್‌ಪಥ್‌ನಲ್ಲಿ ನಡೆಸಲಿರುವ ಪರೇಡ್ ಮತ್ತು ಜನವರಿ 29ರಂದು ವಿಜಯ್ ಚೌಕ್‌ನಲ್ಲಿ ನಡೆಯಲಿರುವ 'ಬೀಟಿಂಗ್ ದಿ ರಿಟ್ರೀಟ್' ಸಮಾರಂಭಗಳು ಅತ್ಯಂತ ಮುಖ್ಯವಾಗಿವೆ.
ಬೀಟಿಂಗ್ ರಿಟ್ರೀಟ್ಗೆ ಡ್ರೋನ್ ಪ್ರದರ್ಶನ:ರಕ್ಷಣಾ ಸಚಿವಾಲಯದ ಪ್ರಕಾರ, ಇದೇ ಮೊದಲ ಬಾರಿಗೆ, ಭಾರತೀಯ ವಾಯುಪಡೆಯ 75 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಗ್ರ್ಯಾಂಡ್ ಫ್ಲೈಪಾಸ್ಟ್ ಪ್ರದರ್ಶನ ಮಾಡಲಾಗುತ್ತದೆ.
ಇದರ ಜೊತೆಗೆ 'ಬೀಟಿಂಗ್ ದಿ ರಿಟ್ರೀಟ್' ಸಮಾರಂಭದ ನಿಮಿತ್ತ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಒಂದು ಸಾವಿರ ಡ್ರೋನ್ಗಳ ಪ್ರದರ್ಶನವನ್ನು ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಪ್ರೊಜೆಕ್ಷನ್ ಮ್ಯಾಪಿಂಗ್ ಅನ್ನು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಮೊದಲ ಬಾರಿಗೆ ತೋರಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮದ ಸಮಯದಲ್ಲಿ ಇದೇ ಮೊದಲ ಬಾರಿಗೆ 480 ಮಂದಿಯಿಂದ ವಂದೇಮಾತರಂ ಗೀತೆಗೆ ನೃತ್ಯವನ್ನು ಆಯೋಜಿಸಲಾಗಿದೆ.
ಶಹೀದಾನ್ ಕೋ ಶತಶತ್ ನಮನ್: ಮೊದಲ ಬಾರಿಗೆ ರಾಜಪಥ್ನ ಮುಖ್ಯ ಮೆರವಣಿಗೆಯಲ್ಲಿ ರಾಷ್ಟ್ರೀಯ ಕೆಡೆಟ್‌ನಿಂದ 'ಶಹೀದಾನ್ ಕೋ ಶತಶತ್ ನಮನ್' ಸಮಾರಂಭ ನಡೆಯಲಿದೆ. ಸಂಸ್ಕೃತಿ ಇಲಾಖೆಯಿಂದ ನಡೆಯಲಿರುವ 'ಕಲಾ ಕುಂಭ' ಸಮಾರಂಭವನ್ನು ಜನರು ವೀಕ್ಷಿಸಲು 10 ಅತಿ ದೊಡ್ಡ ಎಲ್ಇಡಿ ಪರದೆಗಳನ್ನು ಸ್ಥಾಪಿಸಲಾಗಿದೆ.
ಪರೇಡ್‌ನಲ್ಲಿ ಭಾಗವಹಿಸಲು ಲಸಿಕೆ ಕಡ್ಡಾಯ:ಪರೇಡ್‌ನಲ್ಲಿ ಎರಡು ಬಾರಿ ಲಸಿಕೆ ಹಾಕಿದ ವಯಸ್ಕರಿಗೆ, ಒಂದು ಡೋಸ್ ಲಸಿಕೆ ಹಾಕಿದ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪರೇಡ್ ವೀಕ್ಷಿಸಲು ಅನುಮತಿ ಇಲ್ಲ.
ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲು ಮತ್ತು 'ಬೀಟಿಂಗ್ ದಿ ರಿಟ್ರೀಟ್' ಸಮಾರಂಭದಲ್ಲಿ ಆಟೋ ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರೊಂದಿಗೆ ಗಣರಾಜ್ಯೋತ್ಸವ ಪರೇಡ್ ಸಮಾರಂಭ ಆರಂಭವಾಗಲಿದೆ. ಸಂಪ್ರದಾಯದ ಪ್ರಕಾರ, ರಾಷ್ಟ್ರಧ್ವಜವನ್ನು ಹಾರಿಸಿದ ನಂತರ, ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪರೇಡ್ ಆರಂಭವಾಗಲಿದೆ. ಪರೇಡ್ ಪ್ರಾರಂಭವಾಗುವ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.
ಪರೇಡ್‌ನಲ್ಲಿ ಭಾಗವಹಿಸಲಿರುವ ತುಕಡಿಗಳು:ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಪರೇಡ್ ನಡೆಯುತ್ತಿದೆ.
ಮೇಜರ್ ಜನರಲ್ ಅಲೋಕ್ ಕಾಕರ್, ಚೀಫ್ ಆಫ್ ಸ್ಟಾಫ್, ದೆಹಲಿ ಏರಿಯಾ ಪರೇಡ್ ಸೆಕೆಂಡ್ ಇನ್ ಕಮಾಂಡ್ ಆಗಿರುತ್ತಾರೆ. ರಜಪೂತ್ ರೆಜಿಮೆಂಟ್, ಅಸ್ಸಾಂ ರೆಜಿಮೆಂಟ್, ಜಮ್ಮು ಮತ್ತು ಕಾಶ್ಮೀರ ಲೈಟ್ ರೆಜಿಮೆಂಟ್, ಸಿಖ್ ಲೈಟ್ ರೆಜಿಮೆಂಟ್, ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ ಮತ್ತು ಪ್ಯಾರಾಚೂಟ್ ರೆಜಿಮೆಂಟ್ ಸೇರಿದಂತೆ ಸೇನೆಯ ಒಟ್ಟು ಆರು ಕವಾಯತು ತುಕಡಿಗಳು ಪರೇಡ್‌ನಲ್ಲಿ ಭಾಗವಹಿಸಿವೆ.
ಮದ್ರಾಸ್ ರೆಜಿಮೆಂಟಲ್ ಸೆಂಟರ್, ಕುಮೌನ್ ರೆಜಿಮೆಂಟಲ್ ಸೆಂಟರ್, ಮರಾಠಾ ಲೈಟ್ ರೆಜಿಮೆಂಟಲ್ ಸೆಂಟರ್, ಜಮ್ಮು ಮತ್ತು ಕಾಶ್ಮೀರ ಲೈಟ್ ರೆಜಿಮೆಂಟಲ್ ಸೆಂಟರ್, ಆರ್ಮಿ ಮೆಡಿಕಲ್ ಕಾರ್ಪ್ಸ್ ಸೆಂಟರ್ ಮತ್ತು ಸ್ಕೂಲ್, ಗೂರ್ಖಾ ತರಬೇತಿ ಕೇಂದ್ರ, ಆರ್ಮಿ ಸಪ್ಲೈ ಕಾರ್ಪ್ಸ್ ಸೆಂಟರ್ ಮತ್ತು ಕಾಲೇಜು, ಬಿಹಾರ ರೆಜಿಮೆಂಟಲ್ ಸೆಂಟರ್ ಮತ್ತು ಆರ್ಮಿಯ ಕಾಂಪೋಸಿಟ್ ಬ್ಯಾಂಡ್ ಆರ್ಡನೆನ್ಸ್ ಕಾರ್ಪ್ಸ್ ಸೆಂಟರ್ ತುಕಡಿಗಳೂ ಪರೇಡ್ ನಡೆಸುತ್ತಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭಾರತೀಯ ನೌಕಾಪಡೆ ಬಹು ಆಯಾಮದ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತು 'ಆತ್ಮನಿರ್ಭರ್ ಭಾರತ್' ಅಡಿಯಲ್ಲಿ ಪ್ರಮುಖ ಸೇರ್ಪಡೆಗಳನ್ನು ಹೈಲೈಟ್ ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ನೌಕಾ ಕೋಷ್ಟಕವು ಅದನ್ನು ಅನುಸರಿಸುತ್ತದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದೇಶದ ರಕ್ಷಣಾ ತಂತ್ರಜ್ಞಾನದ ಪ್ರಗತಿಯನ್ನು ಸೂಚಿಸುವ ಎರಡು ಕೋಷ್ಟಕಗಳನ್ನು ಪ್ರದರ್ಶಿಸುತ್ತದೆ.
ಪರೇಡ್ ರಾಜ್‌ಪಥ್‌ನಲ್ಲಿ 10:30ಕ್ಕೆ ಪ್ರಾರಂಭವಾಗುತ್ತದೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರೇಕ್ಷಕರಿಗೆ ಆಸನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೋಡಲು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Republic Day: ಲಡಾಖ್ನಲ್ಲಿ ಕೊರೆಯುವ ಚಳಿಯಲ್ಲಿ ಐಟಿಬಿಪಿಯಿಂದ ಗಣರಾಜ್ಯೋತ್ಸವ ಆಚರಣೆ