ನವದೆಹಲಿ : ಚೀನಾ ಜಲ ಪ್ರದೇಶದಲ್ಲಿ ಎರಡು ಹಡಗುಗಳಲ್ಲಿ ಸಿಲುಕಿಕೊಂಡಿರುವ 39 ಭಾರತೀಯ ನಾವಿಕರಿಗೆ ತುರ್ತು ಮತ್ತು ಸಮಯೋಚಿತ ಸಹಾಯ ನೀಡುವಂತೆ ಭಾರತ ಕೋರಿದೆ.
ಭಾರತದ ಬೃಹತ್ ಸರಕು ಸಾಗಾಣಿಕೆ ಹಡಗು ಎಂ ವಿ ಜಗ್ ಆನಂದ್ ಜೂನ್ 13ರಿಂದ ಚೀನಾದ ಹೆಬೈ ಪ್ರಾಂತ್ಯದ ಜಿಂಗ್ಟಾಂಗ್ ಬಂದರಿನ ಬಳಿ ಲಂಗರು ಹಾಕಿದೆ. ಅದರಲ್ಲಿ 23 ಭಾರತೀಯ ನಾವಿಕರು ಇದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಅದೇ ರೀತಿ ಸೆಪ್ಟೆಂಬರ್ 20ರಿಂದ ಚೀನಾದ ಕಾಫೀಡಿಯನ್ ಬಂದರಿನ ಬಳಿ ಎಂ ವಿ ಅನಾಸ್ತಾಸಿಯಾ ಎಂಬ ಮತ್ತೊಂದು ಹಡಗು ಲಂಗರು ಹಾಕಿದೆ. ಅದರಲ್ಲಿ 16 ಭಾರತೀಯ ಪ್ರಜೆಗಳೊಂದಿಗೆ ಹಡಗಿನ ಸಿಬ್ಬಂದಿ ಸಿಲುಕಿದ್ದಾರೆ. ಈ ಎರಡೂ ಹಡಗುಗಳು ತಮ್ಮ ಸರಕುಗಳನ್ನು ಖಾಲಿ ಮಾಡಲು ಕಾಯುತ್ತಿವೆ. ದೀರ್ಘ ವಿಳಂಬದ ಕಾರಣ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.