ನವದೆಹಲಿ : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂಬ ಮೈತ್ರಿಕೂಟ ಮಾಡಿಕೊಂಡಿವೆ. ಇದೀಗ ಈ ಮೈತ್ರಿ ಪಕ್ಷಗಳು ಮೂರನೇ ಬಾರಿಗೆ ಸಭೆ ನಡೆಸಲು ಮುಂದಾಗಿದ್ದು, ಬರುವ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಮೀಟಿಂಗ್ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈನ ಪಾವೈನಲ್ಲಿರುವ ಹೋಟೆಲ್ನಲ್ಲಿ ಈ ಬಾರಿಯ ಸಭೆ ನಡೆಯಲಿದ್ದು, ಸೆಪ್ಟೆಂಬರ್ 1ರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಾಗುತ್ತದೆ. ಈ ಹಿಂದೆ ಸಭೆ ಆಯೋಜನೆಯ ದಿನಾಂಕಗಳ ಕುರಿತು ಅನೇಕ ಬಾರಿ ಚರ್ಚೆ ನಡೆದಿತ್ತು. ಆದರೆ, ಆ ದಿನಾಂಕಗಳಲ್ಲಿ ಎಲ್ಲ ನಾಯಕರು ಲಭ್ಯವಿಲ್ಲದ ಕಾರಣ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಬಾರಿಯ ಮೂರನೇ ಸಭೆಯನ್ನು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಒಕ್ಕೂಟದ ಘಟಕಗಳು ಜಂಟಿಯಾಗಿ ಆಯೋಜಿಸುತ್ತಿವೆ. ಉದ್ಧವ್ ಠಾಕ್ರೆ ಗುಂಪು, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಆಯೋಜಿಸಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಇಂಡಿಯಾ ಮೈತ್ರಿ ಕೂಟದ ಮೊದಲ ಸಭೆಯು ಜೂನ್‌ನಲ್ಲಿ ಪಾಟ್ನಾದಲ್ಲಿ ಮತ್ತು ಎರಡನೇ ಸಭೆ ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದಿತ್ತು. ಈ ಬಾರಿ 2024 ರ ಸಾರ್ವತ್ರಿಕ ಚುನಾವಣಾ ಪೂರ್ವ ಮಾತುಕತೆ, ಪ್ರಚಾರದಂತಹ ನಿರ್ದಿಷ್ಟ ಕ್ರಿಯೆಗಳಿಗೆ ಸಮಿತಿಗಳನ್ನು ಘೋಷಿಸುವ ಸಾಧ್ಯತೆಯಿದೆ. ಜೊತೆಗೆ, ಪಕ್ಷಗಳ ನಡುವೆ ಉತ್ತಮ ಸಮನ್ವಯ ಮತ್ತು ಸಹಕಾರಕ್ಕಾಗಿ ಶೀಘ್ರದಲ್ಲೇ ಜಂಟಿ ಕಾರ್ಯದರ್ಶಿಯನ್ನು ಘೋಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.