ನವದೆಹಲಿ:ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಂಸತ್ಗೆ ಕೆಲ ಯುವಕರು ನುಗ್ಗಿ ಪ್ರತಿಭಟಿಸಲು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯೇ ಕಾರಣ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಸಂಸತ್ ಭದ್ರತಾ ವೈಫಲ್ಯ ಹಿನ್ನೆಲೆಯಲ್ಲಿ ಪ್ರತಿಭಟಿಸಿದ 146 ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಿರುವುದನ್ನು ಖಂಡಿಸಿ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ದೇಶಾದ್ಯಂತ ಜಂಟಿ ಪ್ರತಿಭಟನೆ ನಡೆಸುತ್ತಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರಯವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಮಾತನಾಡಿದರು.
'ಎರಡ್ಮೂರು ಯುವಕರು ಸಂಸತ್ಗೆ ನುಗ್ಗಿ, ಸ್ಮೋಕ್ ಸ್ಪ್ರೇ ಮಾಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ಸಂಸದರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯು ಭದ್ರತಾ ವೈಫಲ್ಯ ಕುರಿತಂತೆ ಪ್ರಶ್ನೆ ಮೂಡಿಸುತ್ತಿದೆ. ಅಲ್ಲದೆ, ಯಾಕೆ ಈ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂಬುದರ ಬಗ್ಗೆ ಪ್ರಶ್ನೆ ಎದ್ದಿದೆ. ಇದಕ್ಕೆಲ್ಲ ಉತ್ತರ ದೇಶದಲ್ಲಿರುವ ನಿರುದ್ಯೋಗ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಆದರೆ, ನಮಗೆ ನೋಟಿಸ್ ನೀಡಿದ್ದಲ್ಲದೆ, ಅದನ್ನು ಓದುವ ಅವಕಾಶವನ್ನೂ ನೀಡಲಿಲ್ಲ. ಬಿಜೆಪಿ ಸರ್ಕಾರವಯ ದಲಿತರೊಬ್ಬರಿಗೆ ಮಾತನಾಡಲು ಬಿಡುತ್ತಿಲ್ಲ ಎಂದು ನಾನು ಹೇಳಬೇಕೆ? ನೀವು ನಮ್ಮಿಂದ ಮಾತನಾಡುವ ಹಕ್ಕನ್ನು ಕಿತ್ತುಕೊಳ್ಳಲಾಗುವುದಿಲ್ಲ. ಈ ಸ್ವಾತಂತ್ರ್ಯವನ್ನು ನಮಗೆ ಜವಾಹರ್ಲಾಲ್ ನೆಹರೂ ಹಾಗೂ ಮಹಾತ್ಮಾ ಗಾಂಧಿಯವರು ನೀಡಿದ್ದಾರೆ. ನೀವು ನಮ್ಮ ಸಂಸದರನ್ನು ಅಮಾನತು ಮಾಡಿದ್ದಲ್ಲದೆ, ಅವಿರೋಧವಾಗಿ ಕಾನೂನು ಪಾಸ್ ಮಾಡಿದ್ದೀರಿ. ನಮಗೂ ಹೋರಾಡುವ ಹಕ್ಕಿದೆ' ಎಂದು ಕಿಡಿಕಾರಿದರು.
ಸಂಸತ್ ಭವನದಲ್ಲಿ ಡಿಸೆಂಬರ್ 13ರಂದು ಉಂಟಾದ ಭದ್ರತಾ ಲೋಪದ ಬಗ್ಗೆ ಉಭಯ ಸದನಗಳ ಒಳಗೆ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳ ನಾಯಕರು ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ 'ಇಂಡಿಯಾ'ದ ವಿವಿಧ ಪಕ್ಷಗಳ ಸದಸ್ಯರನ್ನು ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಉಭಯ ಸದನಗಳಿಂದ ಒಟ್ಟೂ 146 ಸಂಸದರನ್ನು ಅಮಾನತು ಮಾಡಲಾಗಿದೆ.
ಅಮಿತ್ ಶಾ ರಾಜೀನಾಮೆ, ಪ್ರಧಾನಿ ಹೇಳಿಕೆಗೆ ಪಟ್ಟು ಹಿಡಿದು ಲೋಕಸಭೆಯಲ್ಲಿ ದಾಂಧಲೆ ನಡೆಸಿದ ಪ್ರತಿಪಕ್ಷಗಳ ಒಟ್ಟು 100 ಸದಸ್ಯರನ್ನು ಸ್ವೀಕರ್ ಅಮಾನತು ಮಾಡಿದ್ದರು. ನಿನ್ನೆ ಕಾಂಗ್ರೆಸ್ನ ಮೂರು ಸಂಸದರು ಅಮಾನತುಗೊಂಡಿದ್ದರು. ಇದಾದ ಬಳಿಕ ಸದನವನ್ನು ಅನಿರ್ದಿಷ್ಟಾವಧಿ ಕಾಲಕ್ಕೆ ಮುಂದೂಡಲಾಗಿತ್ತು. ನಿಗದಿಯಂತೆ ಇಂದು ಸಂಸತ್ ಅಧಿವೇಶನ ಕೊನೆಗೊಳ್ಳಬೇಕಿತ್ತು.