ಜೈಸಲ್ಮೇರ್:ದೇಶದ ಇತಿಹಾಸದಲ್ಲಿ ಮೇ 11 ರ ದಿನವ ಯಾವಾಗಲೂ ವಿಶೇಷ ಕಾರಣಕ್ಕಾಗಿ ನೆನಪಿನಲ್ಲಿರುತ್ತದೆ. 1998 ರ ಈ ದಿನದಂದು ಪೋಖ್ರಾನ್‌ನಲ್ಲಿ ಮೂರು ಪರಮಾಣು ಬಾಂಬ್ಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಭಾರತದ ಈ ನಡೆಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಕಾರಣ ಭಾರತ ನಡೆಸುವ ಪರಮಾಣು ಪರೀಕ್ಷೆಯ ಸುಳಿವು ನೀಡದೇ ಅಷ್ಟು ಗೌಪ್ಯವಾಗಿ ನಡೆಸಲಾಗಿತ್ತು.
ಭಾರತ ನಡೆಸಿದ ಪರಮಾಣು ಯಶಸ್ವಿ ಪರೀಕ್ಷೆಯನ್ನು ಅಮೆರಿಕದ ಸಿಐಎ ಕೂಡ ಒಪ್ಪಿಕೊಂಡಿತ್ತು. ಇದರ ನಂತರ, ಪ್ರತಿ ವರ್ಷ ಮೇ 11 ಅನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 1998 ರ ಪರಮಾಣು ಪರೀಕ್ಷೆಯ ಫಲಿತಾಂಶವೇ ಇಂದು ಭಾರತ ಇಂಟರ್ ನ್ಯಾಷನಲ್ ಥರ್ಮೊನ್ಯೂಕ್ಲಿಯರ್ ಎಕ್ಸ್ಪರಿಮೆಂಟಲ್ ರಿಯಾಕ್ಟರ್(ಐಟಿಇಆರ್) ನಲ್ಲಿ ಭಾಗಿಯಾಯಿತು. ಪರಮಾಣು ತಂತ್ರಜ್ಞಾನದ ವಿಷಯದಲ್ಲಿ ದೇಶವು ಪ್ರಪಂಚದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ.
ಈ ದಿನ ಏಕೆ ವಿಶೇಷ?:ಇದಕ್ಕೂ ಮೊದಲು ಅಂದರೆ 1995ರಲ್ಲಿ ನಡೆದ ಪರಮಾಣು ಬಾಂಬ್ ಪರೀಕ್ಷೆ ವಿಫಲವಾಗಿತ್ತು. ಅಮೆರಿಕದ ಉಪಗ್ರಹ ಮತ್ತು ಗುಪ್ತಚರ ಸಂಸ್ಥೆಗಳು ಭಾರತದ ಪ್ರಯತ್ನಕ್ಕೆ ಅಡ್ಡಿ ಉಂಟು ಮಾಡಿತ್ತು. ಅದಕ್ಕಾಗಿಯೇ 1998 ರ ಪರೀಕ್ಷೆಯನ್ನು ತೀರಾ ರಹಸ್ಯವಾಗಿ ನಡೆಸಲಾಯಿತು. ಪ್ರಪಂಚದ ಎಲ್ಲಾ ಗುಪ್ತಚರ ಸಂಸ್ಥೆಗಳು ಭಾರತದ ಮೇಲೆ ಹದ್ದಿನಕಣ್ಣ ಇಟ್ಟಿದ್ದವು. ಆದರೂ ಈ ಕಾರ್ಯಾಚರಣೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಮೂರು ಅಣ್ವಸ್ತ್ರಗಳನ್ನು ಪರೀಕ್ಷೆ ಮಾಡಿದ ಬಳಿಕ ಎಲ್ಲ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡಿದ್ದವು. ಇದಾದ ಬಳಿಕ ದೇಶ ಜಗತ್ತಿನ ಪರಮಾಣು ಶಕ್ತಿ ರಾಷ್ಟ್ರವಾಯಿತು.