ನಾಗಪುರ (ಮಹಾರಾಷ್ಟ್ರ): ಒಂದೇ ರಾಜಕೀಯ ಪಕ್ಷ ಅಥವಾ ಒಂದು ಸಂಘಟನೆ ಮತ್ತು ಒಬ್ಬ ನಾಯಕನಿಂದಲೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
ಆರ್‌ಎಸ್‌ಎಸ್‌ನ ಕಾರ್ಯಾಧ್ಯಕ್ಷ ಸುನೀಲ್ ಕಿತ್ಕಾರು ಬರೆದಿರುವ 'ವಾರ್ತಾ ಈಶಾನ್ಯ ಭಾರತಚಿ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಸಾಮಾನ್ಯ ಜನರು ಬೀದಿಗಿಳಿದಾಗಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಜನರು ದೊಡ್ಡ ಸಂಖ್ಯೆಯಲ್ಲಿ ಚಳವಳಿಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಬದಲಾವಣೆಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ.
ಸಮಾಜದಲ್ಲಿ ವಾಸಿಸುವ ಜನರು ದುರ್ಬಲರಾಗಬಾರದು. ಹಿಂದೂ ಸಮುದಾಯವನ್ನು ಜಾಗೃತಗೊಳಿಸಿ ತನ್ನದೇ ಆದ ಜವಾಬ್ದಾರಿಯನ್ನು ಗುರುತಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಸ್ವಾಭಿಮಾನ, ಉನ್ನತ ನೈತಿಕ ಮೌಲ್ಯಗಳು, ಸಮಗ್ರತೆ, ದೇಶಭಕ್ತಿ ಮತ್ತು ಶಿಸ್ತುಗಳನ್ನು ಹೊಂದಿದ್ದು ಪ್ರಾಮಾಣಿಕ ಮತ್ತು ನಿಜವಾದ ಸಮಾಜವನ್ನು ನಿರ್ಮಿಸುವಲ್ಲಿ ತಮ್ಮ ಪಾತ್ರವನ್ನು ಪೂರೈಸಬೇಕೆಂದು ತಿಳಿಸಿದರು.