ನವದೆಹಲಿ:ದೇಶದಲ್ಲಿ ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ ಕಾಣಿಸಿಕೊಂಡಿದೆ. ಬಹುತೇಕ ರಾಜ್ಯಗಳಲ್ಲಿ ಒಂದು ಕಿಲೋ ಈರುಳ್ಳಿಯ ಕನಿಷ್ಠ ಬೆಲೆ ರೂ.50ಕ್ಕಿಂತ ಹೆಚ್ಚಿದೆ. ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಹೆಚ್ಚುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮಾರ್ಚ್ 31, 2024 ರವರೆಗೆ ಈರುಳ್ಳಿ ರಫ್ತಿನ ಮೇಲೆ ಕೇಂದ್ರ ನಿಷೇಧ ಹೇರಿದೆ. ಈ ನಿಟ್ಟಿನಲ್ಲಿ ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್‌ಟಿ) ಇತ್ತೀಚಿನ ಅಧಿಸೂಚನೆ ಹೊರಡಿಸಿದೆ.
ದೇಶೀಯವಾಗಿ ಈರುಳ್ಳಿ ಲಭ್ಯವಾಗುವಂತೆ ಮಾಡುವ ಜತೆಗೆ ಬೆಲೆ ನಿಯಂತ್ರಣಕ್ಕೂ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇಂದಿನಿಂದ (ಡಿಸೆಂಬರ್ 8) ಈ ನಿಷೇಧ ಜಾರಿಗೆ ಬರಲಿದೆ. ಕಲವು ವಿನಾಯಿತಿಗಳಿವೆ. ಈ ಅಧಿಸೂಚನೆಗೆ ಮುನ್ನ ಹಡಗುಗಳಲ್ಲಿ ತುಂಬಿದ ಈರುಳ್ಳಿ, ಈಗಾಗಲೇ ಕಸ್ಟಮ್ಸ್‌ಗೆ ಹಸ್ತಾಂತರಿಸಲಾದ ಈರುಳ್ಳಿ ಲೋಡ್ ಅನ್ನು ರಫ್ತು ಮಾಡಬಹುದು ಎಂದು DGFT ಮಾಹಿತಿ ನೀಡಿದೆ. ಆದರೆ, ಇತರ ದೇಶಗಳ ಮನವಿಯಂತೆ ಆ ದೇಶಗಳಿಗೆ ಈರುಳ್ಳಿ ರಫ್ತು ಮಾಡಬಹುದು ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಕೇಂದ್ರವು ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ರಫ್ತು ನೀತಿಯನ್ನು ಹಲವಾರು ಬಾರಿ ಪರಿಷ್ಕರಿಸಿದೆ ಎಂದು ತಿಳಿದಿದೆ. ಈ ವರ್ಷದ ಆಗಸ್ಟ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಿತ್ತು. ನಂತರ ಅಕ್ಟೋಬರ್‌ನಲ್ಲಿ ಅದನ್ನು ಪರಿಷ್ಕರಿಸಿತು. ಈರುಳ್ಳಿಗೆ ಕನಿಷ್ಠ ರಫ್ತು ಬೆಲೆಯನ್ನು (MEP) 800 ಡಾಲರ್‌ಗಳಿಗೆ ನಿಗದಿಪಡಿಸಿತು. ಆದರೆ, ಕೇಂದ್ರ ಸರ್ಕಾರ 'ಬೆಂಗಳೂರು ರೋಸ್' ತಳಿಯ ಈರುಳ್ಳಿಗೆ ರಫ್ತು ಸುಂಕದಿಂದ ವಿನಾಯಿತಿ ನೀಡಿತ್ತು. ಈ ಈರುಳ್ಳಿ ಕರ್ನಾಟಕ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಮತ್ತು 2015 ರಲ್ಲಿ GI ಟ್ಯಾಗ್ ಅನ್ನು ಪಡೆದುಕೊಂಡಿದೆ.
ಓದಿ:ಅವಳಿ ನಗರಕ್ಕೆ ಬಂತು "ಭಾರತ್ ಬ್ರಾಂಡ್" : ಕಡಿಮೆ ಬೆಲೆಯಲ್ಲಿ ಪದಾರ್ಥಗಳ ವಿತರಣೆ
ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ: ಪೂರೈಕೆಯ ಕೊರತೆಯ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಈರುಳ್ಳಿಯ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ನವೆಂಬರ್ 5ರಂದು ಬೆಂಗಳೂರಿನಲ್ಲಿ ಈರುಳ್ಳಿ ಕೆಜಿಗೆ 70 ರಿಂದ 75 ರೂ. ಗೆ ಮಾರಾಟವಾಗುತ್ತಿದೆ. ಶೀಘ್ರವೇ ಬೆಲೆ ಶತಕ ತಲುಪುವ ಸಾಧ್ಯತೆ ಇದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾಧಾರಣ ಗುಣಮಟ್ಟದ ಈರುಳ್ಳಿಯೂ ಕ್ವಿಂಟಲ್‌ಗೆ ₹ 4000 ದಿಂದ 4300 ರೂಪಾಯಿಗೆ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ಮೂಲಕ ಬೆಲೆ ನಿಯಂತ್ರಣದ ಉದ್ದೇಶಕ್ಕಾಗಿ ಇಲ್ಲಿಗೆ ಪೂರೈಸುತ್ತಿರುವ ಈರುಳ್ಳಿಯೂ ಸಹ ಕ್ವಿಂಟಲ್‌ಗೆ ಸುಮಾರು 4,600 ರೂಪಾಯಿಗಳ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಮಹಾರಾಷ್ಟ್ರದ ಈರುಳ್ಳಿ 6000 ರೂಪಾಯಿ ಗಡಿ ದಾಟುತ್ತಿದೆ.