ನವದೆಹಲಿ:ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಉಕ್ರೇನ್ನ ಬುಚಾ ಎಂಬಲ್ಲಿ ನಾಗರಿಕರ ಮಾರಣಹೋಮ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒತ್ತಾಯಿಸಿದೆ. ಉಕ್ರೇನ್ ಕುರಿತಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಬುಚಾದಲ್ಲಿ ನಾಗರಿಕರ ಹತ್ಯೆಗಳಿಂದ ನಾವು ಸಾಕಷ್ಟು ವಿಚಲಿತರಾಗಿದ್ದೇವೆ. ಇದನ್ನು ನಾವು ಖಂಡಿಸುತ್ತೇವೆ ಮತ್ತು ಸ್ವತಂತ್ರ ತನಿಖೆಗೆ ಒತ್ತಾಯಿಸುತ್ತೇವೆ ಎಂದಿದ್ದಾರೆ.
ಮಾನವೀಯ ಮತ್ತು ವೈದ್ಯಕೀಯ ಸರಬರಾಜುಗಳನ್ನು ಪೂರೈಸುವುದನ್ನು ನಾವು ಬೆಂಬಲಿಸುತ್ತೇವೆ. ಉಕ್ರೇನ್‌ನಲ್ಲಿನ ಭೀಕರ ಮಾನವೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತವು ಉಕ್ರೇನ್ ಮತ್ತು ಅದರ ನೆರೆಹೊರೆಯ ರಾಷ್ಟ್ರಗಳಿಗೆ ಅಗತ್ಯ ವಸ್ತುಗಳನ್ನು ಕಳುಹಿಸುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಉಕ್ರೇನ್‌ಗೆ ಇನ್ನೂ ಹೆಚ್ಚಿನ ಮಾನವೀಯ ಬೆಂಬಲ ನೀಡುತ್ತೇವೆ.
ಇದರೊಂದಿಗೆ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಲು ರಷ್ಯಾ ಮತ್ತು ಉಕ್ರೇನ್ ನಡುವೆ ನೇರ ಮಾತುಕತೆಗೆ ಭಾರತ ಕರೆ ನೀಡುತ್ತಿದೆ. ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ಮಾತುಕತೆಗೆ ಕರೆ ನೀಡಿದ್ದಾರೆ ಎಂದು ಟಿಎಸ್ ತಿರುಮೂರ್ತಿ ಹೇಳಿದ್ದಾರೆ.