ನವದೆಹಲಿ:ಚೀನಾ, ಅಮೆರಿಕ, ಬ್ರೆಜಿಲ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೋವಿಡ್ ಹಠಾತ್ ಏರಿಕೆ ಕಾಣುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ ಪಾಸಿಟಿವ್ ಪ್ರಕರಣಗಳ ಜೀನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೋವಿಡ್ ಪರಿಸ್ಥಿತಿ ಪರಾಮರ್ಶೆಗೆ ಇಂದು ಕೇಂದ್ರ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಪತ್ರ ರವಾನಿಸಿದೆ. ಜಪಾನ್, ಅಮೆರಿಕ, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಕೊರೊನಾ ವೈರಸ್ ತಾಂಡವ ಜೋರಾಗಿದೆ. ಇದು ವಿಶ್ವದ ಇತರೆ ರಾಷ್ಟ್ರಗಳಿಗೆ ಆತಂಕ ತಂದಿದೆ. ಭಾರತದಲ್ಲಿ ಮೂರು ತಿಂಗಳಲ್ಲೇ ಅತಿ ಕಡಿಮೆ ಕೇಸ್ಗಳು ದಾಖಲಾಗಿದ್ದರೂ, ಹೊಸ ರೂಪಾಂತರಿಗಳನ್ನು ಪತ್ತೆ ಮಾಡಲು ಸ್ಯಾಂಪಲ್ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್ಗೆ ಕಳುಹಿಸಲು ಸೂಚಿಸಲಾಗಿದೆ.