ರಾಜಸ್ಥಾನ: ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯ ಮೇಲೆ ಯಾರ ಕೆಂಗಣ್ಣೂ ಬೀಳಬಾರದೆಂದು ಭಾರತ ಸರ್ಕಾರವು ದೃಢವಾದ ಭದ್ರತಾ ವ್ಯವಸ್ಥೆಯನ್ನು ರಚಿಸುತ್ತಿದೆ. ದೇಶದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸುವವರಿಗೆ ತಕ್ಕ ಉತ್ತರ ನೀಡಲಾಗುವುದು. ಜನರ ಸುರಕ್ಷತೆಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಸಲ್ವಾ ಕಲನ್ ಗ್ರಾಮದಲ್ಲಿ ವೀರ್ ದುರ್ಗಾದಾಸ್ ರಾಥೋಡ್ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದ ಎಲ್ಲಾ ಬೆದರಿಕೆಗಳನ್ನು ಎದುರಿಸಲು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ನಮ್ಮ ಸಶಸ್ತ್ರ ಪಡೆಗಳು ಸಜ್ಜಾಗಿವೆ. ‘ಆತ್ಮನಿರ್ಭರ್ ಭಾರತ್ ಅಭಿಯಾನ’ ಅಡಿಯಲ್ಲಿ ಸಶಸ್ತ್ರ ಪಡೆಗಳಿಗೆ ಸ್ಥಳೀಯ ಶಸ್ತ್ರಾಸ್ತ್ರಗಳು ಮತ್ತು ವೇದಿಕೆಗಳನ್ನು ತಯಾರಿಸಲು ರಕ್ಷಣಾ ಸಚಿವಾಲಯವು ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಇದರ ಪರಿಣಾಮ ಕಳೆದ 4 ವರ್ಷಗಳಲ್ಲಿ ದೇಶದ ಶಸ್ತ್ರಾಸ್ತ್ರಗಳ ಆಮದು ಪ್ರಮಾಣ ಶೇಕಡಾ 48 ರಿಂದ 68 ಕ್ಕೆ ಇಳಿದಿದೆ ಎಂದು ಅವರು ಹೇಳಿದರು.