ನವದೆಹಲಿ: ಭಾರತ ತನ್ನ ಯುದ್ಧ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ಪ್ರಮುಖ ಕ್ರಮದಲ್ಲಿ 97 ತೇಜಸ್ ಲಘು ಯುದ್ಧ ವಿಮಾನಗಳು, 156 ಪ್ರಚಂಡ್ ಯುದ್ಧ ಹೆಲಿಕಾಪ್ಟರ್‌ಗಳ ಖರೀದಿ ಸೇರಿ 2.23 ಲಕ್ಷ ಕೋಟಿ ರೂ. ವೆಚ್ಚದ ರಕ್ಷಣಾ ಯೋಜನೆಗಳಿಗೆ ಗುರುವಾರ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಗಡಿಯಲ್ಲಿ ಭಾರತದ ಬಲ ಮತಷ್ಟು ಹೆಚ್ಚಿಸಲು ಈ ಕ್ರಮ ಅತ್ಯಂತ ಪೂರಕವಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ(ಡಿಎಸಿ), ಭಾರತೀಯ ನೌಕಾಪಡೆಗೆ ಮಧ್ಯಮ ಶ್ರೇಣಿಯ ಆ್ಯಂಟಿ ಶಿಪ್ ಕ್ಷಿಪಣಿಗಳ (ಎಂಆರ್‌ಎಎಸ್‌ಎಚ್‌ಎಂ) ಖರೀದಿ ಮತ್ತು ಭಾರತೀಯ ವಾಯುಪಡೆಯ 84 ಎಸ್‌ಯು-30 ಫೈಟರ್ ಜೆಟ್‌ಗಳನ್ನು ನವೀಕರಿಸುವ ಯೋಜನೆಗಳಿಗೆ ಅನುಮತಿಸಿದೆ.
ರಕ್ಷಣಾ ಉದ್ಯಮಕ್ಕೆ ಉತ್ತೇಜನ:ರಕ್ಷಣಾ ಉದ್ಯಮದಲ್ಲಿ 2.23 ಲಕ್ಷ ಕೋಟಿ ಮೌಲ್ಯದ ಒಟ್ಟು ರಕ್ಷಣಾ ವಸ್ತುಗಳ ಸಂಗ್ರಹಣೆಯಲ್ಲಿ ಶೇಕಡಾ 98ರಷ್ಟು ದೇಶೀಯ ಕೈಗಾರಿಕೆಗಳಿಂದ ಪಡೆಯಲಾಗುವುದು. ಆತ್ಮನಿರ್ಭರ್ ಭಾರತ್ ಗುರಿ ಸಾಧಿಸುವಲ್ಲಿ ಭಾರತೀಯ ರಕ್ಷಣಾ ಉದ್ಯಮಕ್ಕೆ ಗಣನೀಯ ಉತ್ತೇಜನ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಮೂರು ವರ್ಷಗಳಿಂದ ಪೂರ್ವ ಲಡಾಖ್‌ನಲ್ಲಿ ಹಲವಾರು ಘರ್ಷಣೆಗಳು ನಡೆಯುತ್ತಿವೆ. ಭಾರತವು ಚೀನಾದೊಂದಿಗೆ ಕಟುವಾದ ಮಿಲಿಟರಿ ಬಿಕ್ಕಟ್ಟು ಎದುರಿಸುತ್ತಿದೆ. ಇದರ ಜೊತೆಗೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಯುದ್ಧನೌಕೆಗಳು ಸಂಖ್ಯೆ ಹೆಚ್ಚಾಗುತ್ತಿದ್ದು, ಆಕ್ರಮಣಗಳ ಕಳವಳ ನಡುವೆಯೇ ಭಾರತ ಮೆಗಾ ರಕ್ಷಣಾ ವಸ್ತುಗಳನ್ನು ಸಂಗ್ರಹಣೆ ಯೋಜನೆಗಳಿಗೆ ಅನುಮೋದಿಸಿದೆ.
67,000 ಕೋಟಿ ರೂ. ವೆಚ್ಚದಲ್ಲಿ ಖರೀದಿ:97 ತೇಜಸ್ ಲಘು ಯುದ್ಧ ವಿಮಾನದ (ಮಾರ್ಕ್ ಐಎ) ಹೆಚ್ಚುವರಿ ಬ್ಯಾಚ್ ಅನ್ನು ಸುಮಾರು 67,000 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ. ಫೆಬ್ರವರಿ 2021ರಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗಾಗಿ 83 ತೇಜಸ್ MK-1A ಜೆಟ್‌ಗಳ ಖರೀದಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನೊಂದಿಗೆ 48,000 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿತ್ತು.
ವಾಯುಸೇನೆಗೆ ಮತ್ತಷ್ಟು ಬಲ:ಭಾರತೀಯ ವಾಯುಪಡೆಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ತೇಜಸ್ ವಿಮಾನಗಳ ಸಂಖ್ಯೆ 180ಕ್ಕೆ ಏರಿಕೆಯಾಗಲಿದೆ. 156 ಪ್ರಚಂಡ್ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳಲ್ಲಿ (ಎಲ್‌ಸಿಎಚ್) 90 ಸೇನೆಗೆ ಮತ್ತು 66 ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿವೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿದ 5.8-ಟನ್ ಅವಳಿ-ಎಂಜಿನ್ ಎಲ್‌ಸಿಎಚ್ ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ. ಎತ್ತರದ ಪ್ರದೇಶಗಳಲ್ಲಿ ಶತ್ರು ಟ್ಯಾಂಕ್‌ಗಳು, ಬಂಕರ್‌ಗಳು, ಡ್ರೋನ್‌ಗಳು ಮತ್ತು ಇತರ ಉಪಕರಣಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಲಿಕಾಪ್ಟರ್ ಅತ್ಯಾಧುನಿಕ ಫೀಚರ್ಗಳನ್ನು ಹೊಂದಿದ್ದು, ದೃಢವಾದ ರಕ್ಷಾಕವಚ ಮತ್ತು ಅಸಾಧಾರಣ ರಾತ್ರಿ ಸಮಯದಲ್ಲಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುವ ಸಂಪೂರ್ಣ ಸಾಮರ್ಥ್ಯ ಇದಕ್ಕಿದೆ.
ವಿದೇಶಿ ಅವಲಂಬನೆ ಗಣನೀಯ ಇಳಿಕೆ:"ಈ ಉಪಕರಣಗಳ ಖರೀದಿಯು ಭಾರತೀಯ ವಾಯುಸೇನೆಗೆ ಅಗಾಧವಾದ ಶಕ್ತಿಯನ್ನು ಒದಗಿಸುತ್ತದೆ. ದೇಶೀಯ ರಕ್ಷಣಾ ಉದ್ಯಮಗಳಿಂದ ಸ್ವಾಧೀನಪಡಿಸಿಕೊಳ್ಳುವಿಕೆ ಹಾಗೂ ಸ್ಥಳೀಯ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇದು ವಿದೇಶಿ ಮೂಲದ ಸಲಕರಣೆ ತಯಾರಕರ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ" ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ:ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರ ಅವಕಾಶ: ಕೇಂದ್ರ ಸರ್ಕಾರ ಆರೋಪ