ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನಲ್ಲಿ ಸೆಪ್ಟೆಂಬರ್ 25ರಂದು ನಡೆಯಲಿರುವ ಭಾರತ - ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯದ ಟಿಕೆಟ್ ಖರೀದಿಗೆ ಕ್ರಿಕೆಟ್ ಖರೀದಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇಂದು ಸಿಕಂದರಾಬಾದ್ ಜಿಮ್ಖಾನಾ ಮೈದಾನದಲ್ಲಿ ಟಿಕೆಟ್ಗಾಗಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಉಂಟಾಗಿದೆ. ಇದರಿಂದ ನಾಲ್ಕಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.
ಇಂದಿನಿಂದ ಆಫ್ಲೈನ್ನಲ್ಲಿ ಟಿಕೆಟ್ ಮಾರಾಟದ ಬಗ್ಗೆ ಘೋಷಿಸುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಜಿಮ್ಖಾನಾ ಮೈದಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಟಿಕೆಟ್ ಖರೀದಿಗೆ ಸಾಕಷ್ಟು ಜನ ಬರುವ ನಿರೀಕ್ಷೆಯಿದ್ದರೂ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ ಅಭಿಮಾನಿಗಳಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಇನ್ನು ಕೆಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಬಹಳ ದಿನಗಳ ನಂತರ ಕ್ರಿಕೆಟ್ ಪಂದ್ಯ: ಪಾಸ್ ವಿತರಣೆ ವಿಚಾರದಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಕೋವಿಡ್ ಪರಿಸ್ಥಿತಿಯಿಂದಾಗಿ ಹೈದರಾಬಾದ್ ಸೇರಿದಂತೆ ತೆಲಂಗಾಣದ ಅಭಿಮಾನಿಗಳಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಅವಕಾಶವಿರಲಿಲ್ಲ.
ಹೈದರಾಬಾದ್‌ನಲ್ಲಿ ಐಪಿಎಲ್ ಪಂದ್ಯಗಳನ್ನೂ ಆಯೋಜಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಬಹಳ ದಿನಗಳ ನಂತರ ಹೈದರಾಬಾದ್‌ನಲ್ಲಿ ಪಂದ್ಯ ನಡೆಯುತ್ತಿದೆ. ಆದರೆ, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಈಗ ಅಭಿಮಾನಿಗಳಿಗೆ ಸುಲಭ ಪ್ರಕ್ರಿಯೆಯಲ್ಲಿ ಟಿಕೆಟ್ ನೀಡಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಕೇಳಿ ಬಂದಿದೆ.