ನವದೆಹಲಿ: ಹವಾಮಾನ ಬದಲಾವಣೆಯ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತವು ವಿಶ್ವದ ಅಗ್ರ 5 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಮತ್ತು ಜಿ 20 ರಾಷ್ಟ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಜರ್ಮನ್ ವಾಚ್, ನ್ಯೂ ಕ್ಲೈಮೇಟ್ ಇನ್ಸ್ಟಿಟ್ಯೂಟ್ ಮತ್ತು ಕ್ಲೈಮೇಟ್ ಆಕ್ಷನ್ ನೆಟ್ವರ್ಕ್ ಇಂಟರ್ನ್ಯಾಷನಲ್ ಪ್ರಕಟಿಸಿದ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (ಸಿಸಿಪಿಐ, 2023) ವರದಿಯ ಪ್ರಕಾರ ಭಾರತವು ಈಗ 8 ನೇ ಸ್ಥಾನದಲ್ಲಿದೆ.
ದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಭಾರತದ ಶ್ರೇಯಾಂಕ ಅತ್ಯುತ್ತಮ: ನವೆಂಬರ್ 2022 ರಲ್ಲಿ COP 27 ನಲ್ಲಿ ಬಿಡುಗಡೆಯಾದ CCPI ಯ ಇತ್ತೀಚಿನ ವರದಿಯು ಡೆನ್ಮಾರ್ಕ್, ಸ್ವೀಡನ್, ಚಿಲಿ ಮತ್ತು ಮೊರಾಕ್ಕೊ ಸಣ್ಣ ದೇಶಗಳು ಕ್ರಮವಾಗಿ 4, 5, 6 ಮತ್ತು 7 ನೇ ಸ್ಥಾನದಲ್ಲಿವೆ, ಮೊದಲ, ಎರಡನೇ ಮತ್ತು ಮೂರನೇ ಸ್ಥಾನವನ್ನು ಯಾವುದೇ ದೊಡ್ಡ ದೇಶಕ್ಕೆ ನೀಡಲಾಗಿಲ್ಲ, ಆದ್ದರಿಂದ ಭಾರತದ ಶ್ರೇಯಾಂಕವು ಎಲ್ಲಾ ದೊಡ್ಡ ಆರ್ಥಿಕತೆಯ ದೇಶಗಳಲ್ಲೇ ಅತ್ಯುತ್ತಮವಾಗಿದೆ" ಎಂದು ಕೇಂದ್ರ ಇಂಧನ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಸಿಪಿಐ ಅಂತಾರಾಷ್ಟ್ರೀಯ ಹವಾಮಾನ ರಾಜಕೀಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಹವಾಮಾನ ಸಂರಕ್ಷಣಾ ಪ್ರಯತ್ನಗಳ ಜೊತೆಗೆ ವೈಯಕ್ತಿಕವಾಗಿ ದೇಶಗಳು ಮಾಡಿದ ಪ್ರಗತಿಯ ಹೋಲಿಕೆ ಮಾಡುತ್ತದೆ.
2005 ರಿಂದ ವಾರ್ಷಿಕವಾಗಿ ಪ್ರಕಟವಾಗುತ್ತಿರುವ ಹವಾಮಾನ ಬದಲಾವಣೆ ಕಾರ್ಯಕ್ಷಮತೆ ಸೂಚ್ಯಂಕ (ಸಿಸಿಪಿಐ) 59 ದೇಶಗಳು ಮತ್ತು ಐರೋಪ್ಯ ಒಕ್ಕೂಟದ ಹವಾಮಾನ ಸಂರಕ್ಷಣಾ ಕಾರ್ಯಕ್ಷಮತೆಯನ್ನು ಪತ್ತೆಹಚ್ಚಲು ಸಿಸಿಪಿಐ ಸ್ವತಂತ್ರ ಮೇಲ್ವಿಚಾರಣಾ ಸಾಧನವಾಗಿದೆ.
ಪ್ರತಿ ವರ್ಷ ಸಿಸಿಪಿಐ ದೇಶಗಳಲ್ಲಿ ಸಾರ್ವಜನಿಕ ಮತ್ತು ರಾಜಕೀಯ ಚರ್ಚೆಗಳನ್ನು ರೂಪಿಸುತ್ತದೆ. ಜಾಗತಿಕ ಹಸಿರುಮನೆ ಅನಿಲ (ಜಿಎಚ್ಜಿ) ಹೊರಸೂಸುವಿಕೆಯ ಶೇ 92 ರಷ್ಟನ್ನು ಹೊಂದಿರುವ 59 ದೇಶಗಳ ಹವಾಮಾನ ಸಂರಕ್ಷಣಾ ಕಾರ್ಯಕ್ಷಮತೆಯನ್ನು ನಾಲ್ಕು ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ: ಜಿಎಚ್ಜಿ ಹೊರಸೂಸುವಿಕೆ (ಒಟ್ಟಾರೆ ಸ್ಕೋರ್ ಶೇ 40), ನವೀಕರಿಸಬಹುದಾದ ಇಂಧನ ಬಳಕೆ (ಒಟ್ಟಾರೆ ಸ್ಕೋರ್ 20%), ಇಂಧನ ಬಳಕೆ (ಒಟ್ಟಾರೆ ಸ್ಕೋರ್ ಶೇ 20) ಮತ್ತು ಹವಾಮಾನ ನೀತಿ (ಒಟ್ಟಾರೆ ಸ್ಕೋರ್ ಶೇ20) ನೀಡಲಾಗುತ್ತದೆ.