ಮುಂಬೈ, ಮಹಾರಾಷ್ಟ್ರ:ಇಂದಿನಿಂದ ಇಂಡಿಯಾ ಮೈತ್ರಿಕೂಟದ ಸಭೆ ಮುಂಬೈನಲ್ಲಿ ನಡೆಯಲಿದೆ. ಒಂದೆಡೆ ಈ ಸಭೆಯಲ್ಲಿ ಭಾಗವಹಿಸಲು ವಿರೋಧ ಪಕ್ಷದ ನಾಯಕರು ಮುಂಬೈಗೆ ಆಗಮಿಸುತ್ತಿದ್ದರೆ ಮತ್ತೊಂದೆಡೆ ಸಭೆಗೂ ಮುನ್ನವೇ ವಿಭಿನ್ನ ಧ್ವನಿಗಳು ಕೇಳಿ ಬರುತ್ತಿವೆ.
ಆಯಾಯ ಪಕ್ಷಗಳ ನಾಯಕರು ನಮ್ಮದೇ ಪಕ್ಷದ ಮುಖಂಡರು ಪ್ರಧಾನಿ ಅಭ್ಯರ್ಥಿ ಆಗಲಿ ಎಂಬ ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಅರವಿಂದ್ ಕೇಜ್ರಿವಾಲ್ ಹೆಸರನ್ನು ತೆಗೆದುಕೊಂಡರೆ, ಎಸ್‌ಪಿ ಪಕ್ಷದಿಂದ ಈಗಾಗಲೇ ಅಖಿಲೇಶ್ ಯಾದವ್, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಹೆಸರುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಗ ಈ ಸಭೆಯಲ್ಲಿ ಸಾಮಾನ್ಯ ನಿಲುವಿಗೆ ಬರುವುದೇ ಎಂಬ ಪ್ರಶ್ನೆ ಮೂಡಿದೆ. ಯಾರು ನಾಯಕರಾಗುತ್ತಾರೆ, ಯಾರು ಸಂಚಾಲಕರಾಗುತ್ತಾರೆ, ಯಾರು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತಾರೆ ಎಂಬ ಹಲವು ಪ್ರಶ್ನೆಗಳು ಇದೀಗ ಎದ್ದಿದ್ದು, ಇಂದಿನ ಸಭೆಯಲ್ಲಿ ಯಾವೆಲ್ಲ ನಿರ್ಧಾರಗಳು ಹೊರ ಬೀಳಲಿವೆ ಎಂಬ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಕೆಲವು ಸಮೀಕ್ಷೆಗಳ ಫಲಿತಾಂಶಗಳು ಪ್ರಧಾನಿ ಮೋದಿ ಎದುರಿಸಲು ಪ್ರತಿಪಕ್ಷಗಳಿಗೆ ಬಲ ಬಂದಿದೆ. ಬಿಜೆಪಿ ಎದುರಾಳಿಗಳು ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಿವೆ ಎಂಬ ಅಂಶಗಳು ಹೊರಬಿದ್ದಿವೆ. ಇದು ಇಂಡಿಯಾ ಮೈತ್ರಿಕೂಟಕ್ಕೆ ಆನೆ ಬಲ ನೀಡಿದಂತಾಗಿದೆ.
ಎರಡು ದಿನಗಳ ಕಾಲ ನಡೆಯಲಿರುವ ಸಭೆ: ವಿರೋಧ ಪಕ್ಷಗಳ ಮೂರನೇ ಸಭೆ ಮುಂಬೈನಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಆರ್‌ಜೆಡಿ ಅಧ್ಯಕ್ಷ ಲಾಲು ಯಾದವ್ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮಂಗಳವಾರವೇ ಮುಂಬೈಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಜೆಡಿಯು ಅಧ್ಯಕ್ಷ ಲಾಲನ್ ಸಿಂಗ್ ಇಂದು ಮುಂಬೈ ತಲುಪಲಿದ್ದಾರೆ. ಇಂಡಿಯಾ ಮೈತ್ರಿಕೂಟದ ಈ ಮೂರನೇ ಸಭೆಯನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ. ಏಕೆಂದರೆ ರಾಜಕೀಯ ಪಕ್ಷಗಳ ನಡುವೆ ಸೀಟುಗಳನ್ನು ಹೇಗೆ ಹಂಚಲಾಗುತ್ತದೆ ಎಂಬುದರ ಕುರಿತು ಇಂದು ಚರ್ಚಿಸಲಾಗುವುದು. ಇದರೊಂದಿಗೆ ಪ್ರಮುಖ ಸಮನ್ವಯಾಧಿಕಾರಿ ಹುದ್ದೆಯ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗುವುದು.
ಇಂಡಿಯಾ ಮೈತ್ರಿಕೂಟದ ಸಂಚಾಲಕ ನಿತೀಶ್ ಕುಮಾರ್?: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮಗೆ ಯಾವುದೇ ಹುದ್ದೆ ಬೇಡ ಎಂದು ನಿರಂತರವಾಗಿ ಹೇಳುತ್ತಿದ್ದಾರೆ. ಅವರು ಸಂಚಾಲಕ ಅಥವಾ ಪ್ರಧಾನಿ ಅಭ್ಯರ್ಥಿಯಾಗಲು ಬಯಸುವುದಿಲ್ಲ. ಆದರೆ ಜೆಡಿಯು ಕೋಟಾದಿಂದ ಬಿಹಾರ ಸರ್ಕಾರದ ಹಲವು ಸಚಿವರು ಮತ್ತು ಹಿರಿಯ ನಾಯಕರು ನಿತೀಶ್ ಕುಮಾರ್ ಅವರು ಪ್ರಧಾನಿ ಮತ್ತು ಸಂಚಾಲಕ ಹುದ್ದೆಗೆ ಅತ್ಯಂತ ಅರ್ಹ ಅಭ್ಯರ್ಥಿಯಾಗಬಹುದು ಎಂದು ನಿರಂತರವಾಗಿ ಹೇಳುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ನಿತೀಶ್ ಕುಮಾರ್ ಅವರನ್ನು ಸಂಚಾಲಕರನ್ನಾಗಿಸಿದರೆ ಮೈತ್ರಿಕೂಟಕ್ಕೆ ಲಾಭವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ನಿತೀಶ್‌ಗೆ ದೊಡ್ಡ ಹುದ್ದೆ ಬಯಸುತ್ತಿರುವ ಜೆಡಿಯು ನಾಯಕರು: ಜೆಡಿಯು ಸಲಹೆಗಾರ ಮತ್ತು ಮುಖ್ಯ ವಕ್ತಾರ ಕೆಸಿ ತ್ಯಾಗಿ ಅವರು ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿ ಆದರೆ, ಎಲ್ಲರ ಒಪ್ಪಿಗೆಯೊಂದಿಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ಜೆಡಿಯುನ ಹಿರಿಯ ನಾಯಕ ಹಾಗೂ ಸಂಸದ ವಶಿಷ್ಠ ನಾರಾಯಣ ಸಿಂಗ್ ಕೂಡ ನಿತೀಶ್ ಕುಮಾರ್‌ಗೆ ಪ್ರಧಾನಿಯಾಗುವ ಎಲ್ಲ ಸಾಮರ್ಥ್ಯವೂ ಇದೆ ಎಂದಿದ್ದಾರೆ. ವಿರೋಧ ಪಕ್ಷಗಳು ನಿತೀಶ್ ಕುಮಾರ್ ಅವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯನ್ನಾಗಿಸಿದರೆ ಪ್ರಯೋಜನವಾಗುವುದಾದರೂ ವಿರೋಧ ಪಕ್ಷಗಳ ಸಭೆಯಲ್ಲಿ ಎಲ್ಲ ಪಕ್ಷಗಳ ಒಪ್ಪಿಗೆಯ ಮೇರೆಗೆ ನಿರ್ಧಾರವಾಗಲಿದೆ.
ಎರಡು ದಿನಗಳ ಸಭೆಯಲ್ಲಿ ಈ ವಿಷಯಗಳ ಚರ್ಚೆ:ಎರಡು ದಿನಗಳ ವಿರೋಧ ಪಕ್ಷಗಳ ಸಭೆಯಲ್ಲಿ 11 ಸದಸ್ಯರ ಸಮನ್ವಯ ಸಮಿತಿಯ ಹೆಸರಿನ ಬಗ್ಗೆ ನಿರ್ಧಾರ, ಸಂಯೋಜಕರ ಹುದ್ದೆಯ ಬಗ್ಗೆ ನಿರ್ಧಾರ, ಇಡೀ ದೇಶದಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಒಬ್ಬ ಅಭ್ಯರ್ಥಿಯನ್ನು ನೀಡುವ ಬಗ್ಗೆ ಒಮ್ಮತಕ್ಕೆ ಬರುವ ನಿರ್ಧಾರ, ಇದಕ್ಕಾಗಿ 450ಕ್ಕೂ ಹೆಚ್ಚು ಸ್ಥಾನಗಳಿಗೆ ರಣತಂತ್ರ ರೂಪಿಸಲಾಗುತ್ತಿದೆ. ಇದರೊಂದಿಗೆ ‘ಒಂದು ಧ್ವಜ ಒಂದು ಚಿಹ್ನೆ’ ಬಗ್ಗೆಯೂ ನಿರ್ಧಾರ ಕೈಗೊಳ್ಳಬಹುದಾಗಿದೆ. ರಾಜ್ಯಗಳಲ್ಲಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ ಸೀಟು ಹಂಚಿಕೆ ಹೇಗಿರಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.
ಕಾಂಗ್ರೆಸ್ ಪೋಸ್ಟರ್‌ನಲ್ಲಿ ಕೇಜ್ರಿವಾಲ್ ನಾಪತ್ತೆ:ಮುಂಬೈ ಕಾಂಗ್ರೆಸ್‌ನ ಪೋಸ್ಟರ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅವರು ವಿರೋಧ ಪಕ್ಷದ ನಾಯಕರ ಚಿತ್ರದಿಂದ ಕಾಣೆಯಾಗಿದ್ದಾರೆ. ಸಭೆಯ ಒಂದು ದಿನದ ಮೊದಲು, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ವಕ್ತಾರ ಪ್ರಿಯಾಂಕಾ ಕಕ್ಕರ್ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಬೇಕು ಎಂದು ಹೇಳಿದಾಗ ವಿವಾದ ಪ್ರಾರಂಭವಾಯಿತು. ಆದರೆ ಪಕ್ಷದ ಇತರ ನಾಯಕರು ಕೇಜ್ರಿವಾಲ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ರೇಸ್‌ನಲ್ಲಿ ಮಮತಾ, ರಾಹುಲ್ ಗಾಂಧಿ?:ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಜೂಹಿ ಸಿಂಗ್, 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ವಿರೋಧ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಹೆಸರನ್ನು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ತೆಗೆದುಕೊಂಡಿದ್ದರು. ಇವರಿಬ್ಬರ ಹೊರತಾಗಿ ಹಲವು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಹೆಸರು ತೆಗೆದುಕೊಂಡಿದ್ದಾರೆ. ಇನ್ನು ಟಿಎಂಸಿ ನಾಯಕರು ಮಮತಾ ಬ್ಯಾನರ್ಜಿ ಹೆಸರನ್ನು ತೆಗೆದುಕೊಳ್ಳುತ್ತಿದ್ದಾರೆ. ಬಿಹಾರದ ಮುಖ್ಯಮಂತ್ರಿ ಈ ರೇಸ್‌ನಲ್ಲಿ ಸ್ವತಃ ಹೇಳುತ್ತಿಲ್ಲವಾದರೂ, ಅವರ ಪಕ್ಷದ ಅನೇಕ ನಾಯಕರು ಅವರನ್ನು ಈ ಹುದ್ದೆಗೆ ಸ್ಪರ್ಧಿ ಎಂದು ಕರೆದಿದ್ದಾರೆ. ವಿರೋಧ ಪಕ್ಷದ ನಾಯಕರ ವಿಭಿನ್ನ ಹೇಳಿಕೆಗಳ ನಡುವೆ ಇತ್ತೀಚಿನ ಕೆಲವು ಸಮೀಕ್ಷೆಗಳು ಏನು ಹೇಳುತ್ತವೆ ಎಂಬುದನ್ನು ನೋಡುವುದು ಸಹ ಅಗತ್ಯವಾಗಿದೆ.
ಓದಿ:ಅರವಿಂದ್ ಕೇಜ್ರಿವಾಲ್ 'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ: ಆಪ್ ವಕ್ತಾರೆ