ನವದೆಹಲಿ :ವಿಪಕ್ಷಗಳ ಇಂಡಿಯಾ ಒಕ್ಕೂಟದ ನಾಲ್ಕನೇ ನಿರ್ಣಾಯಕ ಸಭೆ ಇಂದು ಆರಂಭವಾಗಿದೆ. ಇಲ್ಲಿನ ಅಶೋಕ ಹೋಟೆಲ್ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸುಮಾರು 28 ಪಕ್ಷಗಳ 60 ನಾಯಕರು ಭಾಗವಹಿಸಿದ್ದಾರೆ. ಡಿಸೆಂಬರ್ 6ರಂದು ನಡೆಯಬೇಕಿದ್ದ ಸಭೆಯು ವಿವಿಧ ನಾಯಕರ ಅನಾನುಕೂಲತೆಗಳಿಂದಾಗಿ ಮುಂದೂಲ್ಪಟ್ಟಿತ್ತು.
ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ನಾಯಕ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ , ರಾಘವ್ ಚಡ್ಡಾ, ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ-ಯುನೈಟೆಡ್ ನಾಯಕ ನಿತೀಶ್ ಕುಮಾರ್, ಜೆಡಿ-ಯು ಅಧ್ಯಕ್ಷ ರಾಜೀವ್ ರಂಜನ್ , ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಸಂಜಯ್ ರಾವುತ್, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ರಾಮ್ ಗೋಪಾಲ್ ಯಾದವ್ ಮತ್ತಿತರರು ಪಾಲ್ಗೊಂಡಿದ್ದಾರೆ.
ಮೇನ್ ನಹಿಂ, ಹಮ್ (ನಾನಲ್ಲ, ನಾವು) :ಸಭೆಯಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಚುನಾವಣಾ ಪ್ರಚಾರದ ಕಾರ್ಯತಂತ್ರಗಳ ಬಗ್ಗೆ, ಸೀಟು ಹಂಚಿಕೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಪ್ರತಿಪಕ್ಷಗಳ ಮೈತ್ರಿಕೂಟವು ಸಭೆಯಲ್ಲಿ "ಮೇನ್ ನಹಿಂ, ಹಮ್ (ನಾನಲ್ಲ, ನಾವು)" ಎಂಬ ಧ್ಯೇಯೋದ್ದೇಶದೊಂದಿಗೆ ಮುಂದುವರಿಯಲು ಚಿಂತನೆ ನಡೆಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದೇ ವೇಳೆ, 2024ರ ಲೋಕಸಭಾ ಚುನಾವಣೆಯ ನಂತರವೇ ಪ್ರತಿಪಕ್ಷಗಳ ಒಕ್ಕೂಟವು ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಬೇಕು ಎಂದು ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ. ಸಭೆಗೂ ಮುನ್ನಾ ದಿನ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮಮತಾ ಬ್ಯಾನರ್ಜಿ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿದ್ದರು.