ಮುಂಬೈ:ಆತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರದ ಹಾದಿಯಲ್ಲಿ ಭಾರತವು ಐಬಿಎಂನಂಥ ತಂತ್ರಜ್ಞಾನ ದೈತ್ಯ ಕಂಪನಿಗಳ ಜೊತೆಗೂಡಿ ಕ್ವಾಂಟಮ್ ಮತ್ತು ಉನ್ನತ - ಕಾರ್ಯಕ್ಷಮತೆಯ ಕಂಪ್ಯೂಟಿಂಗ್‌ನಲ್ಲಿ ತನ್ನ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಬಯಸುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬುಧವಾರ ಹೇಳಿದ್ದಾರೆ.
ಐಬಿಎಂನ ಮಹತ್ವಾಕಾಂಕ್ಷಿ 'ಥಿಂಕ್' ಸಮ್ಮೇಳನವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಕ್ವಾಂಟಮ್ ತಂತ್ರಜ್ಞಾನವು ಭಾರತದ ತಾಂತ್ರಿಕ ಪ್ರಯಾಣದ ಅತ್ಯಂತ ಪ್ರಮುಖ ಭಾಗವಾಗಿದೆ ಎಂದು ಹೇಳಿದರು.
ಹೊಸ ತಂತ್ರಜ್ಞಾನಗಳೊಂದಿಗೆ ಹಲವಾರು ಮಾರುಕಟ್ಟೆಯ ಊಹಾಪೋಹಗಳು ಇದ್ದೇ ಇರುತ್ತವೆ. ಆದರೆ, ಆ ಮಾದರಿಯಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಭವಿಷ್ಯದ ಸವಾಲುಗಳನ್ನು ಎದುರಿಸಲು ಭಾರತವು ಕ್ವಾಂಟಮ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್‌ನಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದರು.
ಸಚಿವ ಚಂದ್ರಶೇಖರ್, ಐಬಿಎಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ಮತ್ತು ಐಬಿಎಂ ಸಾಫ್ಟ್‌ವೇರ್‌ನ ಹಿರಿಯ ಉಪಾಧ್ಯಕ್ಷ ಟಾಮ್ ರೊಸಾಮಿಲಿಯಾ ಅವರೊಂದಿಗೆ ಕ್ವಾಂಟಮ್ ತಂತ್ರಜ್ಞಾನದ ಕುರಿತು ಶ್ವೇತಪತ್ರವನ್ನು ಸಹ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.