ವಡೋದರಾ (ಗುಜರಾತ್):2019ರಲ್ಲಿ ನ್ಯೂಜೆರ್ಸಿಯಿಂದ ನಾಪತ್ತೆಯಾಗಿರುವ ಯುವತಿಯೊಬ್ಬರು ಇಲ್ಲಿಯವರೆಗೂ ಎಲ್ಲಿಯೂ ಪತ್ತೆಯಾಗಿಲ್ಲ. ಕಳೆದ 3 ವರ್ಷಗಳಿಂದ ನಾಪತ್ತೆಯಾಗಿರುವ ಮಯೂಷಿ ಭಗತ್ ಅವರನ್ನು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ನಾಪತ್ತೆಯಾದವರ ಪಟ್ಟಿಯಲ್ಲಿ ಸೇರಿಸಿದೆ. ಎಫ್‌ಬಿಐ ಪ್ರಕಟಿಸಿರುವ ಪಟ್ಟಿಯಲ್ಲಿ ಮಯೂಷಿ ಭಗತ್ ಹೆಸರು ತಿಳಿದಿರುವವರು ಎಫ್‌ಬಿಐ ಅನ್ನು ಸಂಪರ್ಕಿಸುವಂತೆಯೂ ಮನವಿ ಮಾಡಲಾಗಿದೆ.
ವಡೋದರದ ಓಂ ನಗರದಲ್ಲಿ ನೆಲೆಸಿರುವ ವಿಕಾಸ್ ಭಗತ್ ಅವರ ಪುತ್ರಿ ಮಯೂಷಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಪಾರುಲ್ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಬಳಿಕ ಅವರು ವಡೋದರಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದರು. ಮಯೂಷಿ 2016ರಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಮಯೂಷಿ ವಿದ್ಯಾರ್ಥಿ ವೀಸಾ ಪಡೆದು ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಹೋಗಿದ್ದರು.