ಆಧುನಿಕ ಜೀವನಶೈಲಿಯಲ್ಲಿ ಹೆಣ್ಣು ಮಕ್ಕಳು ಮದುವೆಗೂ ಮುನ್ನ ಗಂಡಿನ ಜೊತೆ ದೈಹಿಕ ಸಂಬಂಧ ಹೊಂದುತ್ತಿರುವ ನಿದರ್ಶನಗಳು ಸಿಗುತ್ತಿವೆ. ಈ ಮೂಲಕ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ರೀತಿಯ ಲೈಂಗಿಕ ಸಂಬಂಧ ಮಾತ್ರವೇ ಅಲ್ಲ, ಕ್ರೀಡೆ ಮತ್ತು ಗಾಯಗಳಿಂದಲೂ ಕನ್ಯತ್ವ ಕಳೆದುಕೊಳ್ಳುವ ಸಾಧ್ಯತೆಗಳೂ ಇವೆ. ಇತ್ತೀಚಿನ ದಿನಗಳಲ್ಲಿ ಹೀಗೆ ಕನ್ಯತ್ವ ಕಳೆದುಕೊಂಡ ಮಹಿಳೆಯರಲ್ಲಿ ಮತ್ತೆ ಕನ್ಯತ್ವ ಪಡೆಯುವ ಆಸೆ ಹೆಚ್ಚಾಗುತ್ತಿದೆ. ಕನ್ಯತ್ವ ಕಳೆದುಕೊಂಡ ಯುವತಿಯರು ತಮ್ಮ ಪತಿಗೆ ಮತ್ತು ಮರು ಮದುವೆಯಾಗಲು ಬಯಸುವ ವಿಧವೆಯರೂ ಕೂಡ ತಮ್ಮ ಹೊಸ ಪತಿಗೆ ಕನ್ಯತ್ವ ಉಡುಗೊರೆಯಾಗಿ ಕೊಡಲು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಫ್ಯಾಶನ್ ಬೆಳೆಯುತ್ತಿದೆ.
ಪ್ರಾಯೋಗಿಕವಾಗಿ ಶಸ್ತ್ರಚಿಕಿತ್ಸೆ: ಇದೀಗ ಕನ್ಯತ್ವವನ್ನು ಮತ್ತೆ ಗಳಿಸಿಕೊಡುವ ಶಸ್ತ್ರಚಿಕಿತ್ಸೆಗೆ ಬೇಕಾದ ಯಂತ್ರವೊಂದು ಪಾಟ್ನಾದ ಕ್ಲಿನಿಕ್ಗೆ ಬಂದಿದ್ದು, ಸದ್ಯ ಪ್ರಾಯೋಗಿಕವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. 2023ರ ಜನವರಿಯಿಂದ ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆ ಆರಂಭವಾಗಲಿದೆ ಎಂದು ಪಾಟ್ನಾದ ಗೈನೋ ಕಾಸ್ಮೆಟಿಕ್ ಸರ್ಜನ್ ಡಾ.ಹಿಮಾನ್ಶು ರೈ ತಿಳಿಸಿದ್ದಾರೆ.
ಡಾ.ಹಿಮಾನ್ಶು ರೈ ಹೇಳುವಂತೆ, ಈವರೆಗೆ ಕನ್ಯತ್ವ ಶಸ್ತ್ರಚಿಕಿತ್ಸೆಗಾಗಿ 200ಕ್ಕೂ ಹೆಚ್ಚು ಮಂದಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗೆ ನೋಂದಣಿ ಮಾಡಿಸಿಕೊಂಡವರಲ್ಲಿ 35 ರಿಂದ 45 ವರ್ಷ ವಯಸ್ಸಿನ ಮಹಿಳೆಯರೇ ಹೆಚ್ಚು. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತಮ್ಮ ಸಡಿಲ ಯೋನಿಯಿಂದ ಲೈಂಗಿಕತೆಯನ್ನು ಆನಂದಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಮಹಿಳೆಯರೂ ಇದರಲ್ಲಿ ಸೇರಿದ್ದಾರೆ. ಸಡಿಲವಾಗಿರುವ ಯೋನಿಯನ್ನು ಹೈಮೆನ್ ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ತನ್ನ ಲೈಂಗಿಕ ಜೀವನವನ್ನು ಸುಧಾರಿಸಲು ಮಹಿಳೆಯರು ಬಯಸುತ್ತಿದ್ದಾರೆ.
ಕಳೆದ ಆರು ತಿಂಗಳಲ್ಲಿ ಕನ್ಯತ್ವವನ್ನು ಮರಳಿ ಪಡೆಯಲು ಮತ್ತು ಯೋನಿಯನ್ನು ಬಿಗಿಗೊಳಿಸುವ ಕುರಿತು ಐದು ಸಾವಿರಕ್ಕೂ ಮಹಿಳೆಯರು ವಿಚಾರಿಸಿದ್ದು, ಈ ಪೈಕಿ 200ಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಕೂಡ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಶೇ.25ರಿಂದ 30ರಷ್ಟು ಕನ್ಯತ್ವ ಪಡೆಯಲು ನೋಂದಣಿ ನಡೆದರೆ, ಯೋನಿ ಬಿಗಿಗೊಳಿಸಲು ಶೇ 40 ರಷ್ಟು ನೋಂದಣಿಗಳನ್ನು ಮಾಡಲಾಗಿದೆ. ಶೇ.30ರಷ್ಟು ಮಂದಿ ವೃದ್ಧಾಪ್ಯದಲ್ಲಿ ಮೂತ್ರ ಸೋರಿಕೆ ಸಮಸ್ಯೆ ಎದುರಿಸುತ್ತಿರುವವರಾಗಿದ್ದಾರೆ. ಆದರೆ ಮದುವೆಗೆ ಮುಂಚೆ ಕನ್ಯತ್ವ ಕಳೆದುಕೊಂಡು ಮರಳಿ ಪಡೆಯಲು ಬಯಸುವ ಹುಡುಗಿಯರ ಸಂಖ್ಯೆಯೇ ಹೆಚ್ಚು ಎನ್ನುತ್ತಾರೆ ಡಾ.ಹಿಮಾನ್ಶು.
ಮತ್ತೆ ಕನ್ಯತ್ವ ಪಡೆಯುವ ಆಸೆ: ಇಂದಿನ ಜೀವನಶೈಲಿಯಲ್ಲಿ ಹುಡುಗ-ಹುಡುಗಿಯರು ಮದುವೆಗೂ ಮುನ್ನವೇ ದೈಹಿಕ ಸಂಬಂಧ ಹೊಂದಿರುತ್ತಾರೆ. ಹುಡುಗಿ ಲಿವ್-ಇನ್ ರಿಲೇಶನ್ಶಿಪ್ನಲ್ಲಿದ್ದು, ಕೊನೆ ಘಳಿಗೆಯಲ್ಲಿ ಹುಡುಗ ಮದುವೆಗೆ ಒಪ್ಪದೇ ಬಿಟ್ಟು ಹೋಗುವಂತಹ ಹಲವು ಘಟನೆಗಳು ನಡೆಯುತ್ತವೆ. ದೀರ್ಘಕಾಲದವರೆಗೆ ದೈಹಿಕ ಸಂಬಂಧದಲ್ಲಿರುವ ಕಾರಣ, ಹುಡುಗಿಯ ಯೋನಿ ಮಾರ್ಗವು ಸಡಿಲಗೊಂಡಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅನೇಕ ಹುಡುಗಿಯರು ತಮ್ಮ ಹೊಸ ಸಂಗಾತಿಗೆ ಸಂಪೂರ್ಣವಾಗಿ ವರ್ಜಿನ್ ಎಂದು ಹೇಳಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರಂತೆ.