ಹೈದರಾಬಾದ್:ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ವಿಶ್ವದಾದ್ಯಂತ ಯುವಕರಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ.
ವೈದ್ಯರು ಮತ್ತು ತಜ್ಞರು ಈ ಪರಿಸ್ಥಿತಿಗೆ ಮುಖ್ಯ ಕಾರಣ ಅವರ ಅನಾರೋಗ್ಯಕರ ಜೀವನಶೈಲಿ, ಅಧಿಕ ತೂಕ ಮತ್ತು ಬೊಜ್ಜು ಹಾಗೂ ಯುವಜನರಲ್ಲಿ ಧೂಮಪಾನ ಅಥವಾ ಮಾದಕವಸ್ತು ಸೇವನೆಗೆ ಸಂಬಂಧಿಸಿದ ಸಮಸ್ಯೆಗಳೇ ಕಾರಣ ಎಂದು ಹೇಳುತ್ತಾರೆ.
ಆದರೆ ಯುವಕರಲ್ಲಿ ಕ್ಯಾನ್ಸರ್ ಹೆಚ್ಚಾಗಲು ಇನ್ನೂ ಅನೇಕ ಕಾರಣಗಳಿವೆ. ಇದೇ ನಿಟ್ಟಿನಲ್ಲಿ, ಯುವಕರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳ ಕಾರಣಗಳ ಕುರಿತು ತಿಳಿಸುವುದರ ಜೊತೆಗೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ಕ್ಯಾನ್ಸರ್ಗೆ ಸಂಭವನೀಯ ಕಾರಣಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡುವ ಕುರಿತು ಇಂದೋರ್ ಕ್ಯಾನ್ಸರ್ ಪ್ರತಿಷ್ಠಾನದ ತಜ್ಞ ಮತ್ತು ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ದಿಗ್ಪಾಲ್ ಧಾರ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ.
ಯುವಜನರಲ್ಲಿ ಕ್ಯಾನ್ಸರ್ ಹೆಚ್ಚಾಗಲು ಕಾರಣಗಳು:
ಯುವಜನರಲ್ಲಿ ಕ್ಯಾನ್ಸರ್ ಹೆಚ್ಚಾಗಲು ಹಲವು ಕಾರಣಗಳಿವೆ ಎಂದು ಡಾ. ಧಾರ್ಕರ್ ವಿವರಿಸಿದ್ದು, ಅದರಲ್ಲಿ ಬಹುತೇಕ ಎಲ್ಲರೂ ಜಡ ಜೀವನಶೈಲಿ, ಬೊಜ್ಜು ಮತ್ತು ಆನುವಂಶಿಕ ಅಂಶಗಳನ್ನು ಹೊಂದಿರುತ್ತಾರೆ.
ಆದ್ದರಿಂದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆಯಲು, ಯುವಕರಲ್ಲಿ ಡ್ರಗ್ಸ್ / ಆಲ್ಕೊಹಾಲ್ ಸೇವನೆಯ ಮಟ್ಟವನ್ನು ತಿಳಿಯಲು ಸಮೀಕ್ಷೆಗಳು ಅಥವಾ ಸಂಶೋಧನೆಗಳನ್ನು ನಡೆಸುವುದು ಬಹಳ ಮುಖ್ಯ. ಇದಲ್ಲದೆ, ಇನ್ನೂ ಅನೇಕ ಕಾರಣಗಳಿದ್ದು, ಇದಕ್ಕಾಗಿ ಸಂಶೋಧನೆ ತುಂಬಾ ಅವಶ್ಯಕವಾಗಿದೆ.
ಅನುವಂಶಿಕ ಕಾರಣಗಳು:
ಕ್ಯಾನ್ಸರ್ ಪ್ರಕರಣಗಳಲ್ಲಿ ಒಟ್ಟು ಶೇಕಡಾ 10ರಷ್ಟು ಅನುವಂಶಿಕವಾಗಿದೆ. ಆದ್ದರಿಂದ ಈಗಾಗಲೇ ತಮ್ಮ ಕುಟುಂಬದಲ್ಲಿ ಕ್ಯಾನ್ಸರ್ ಇರುವ ಪರಿಸ್ಥಿತಿಯನ್ನು ಹೊಂದಿರುವ ಜನರು ತಮ್ಮ ಆರೋಗ್ಯದ ಕುರಿತು ಜಾಗರೂಕರಾಗಿರಬೇಕು.
ಕ್ಯಾನ್ಸರ್ನ ಆನುವಂಶಿಕ ಕಾರಣಗಳ ಬಗ್ಗೆ ಈ ಹಿಂದೆ ಸಾಕಷ್ಟು ಸಂಶೋಧನೆಗಳು ನಡೆದಿವೆ ಎಂದು ಡಾ. ಧಾರ್ಕರ್ ವಿವರಿಸುತ್ತಾ, ಇದರ ಫಲಿತಾಂಶಗಳು ಸ್ತನ, ಗರ್ಭಾಶಯ ಅಥವಾ ಅಂಡಾಶಯ ಮತ್ತು ದೊಡ್ಡ ಕರುಳು ಅಥವಾ ಕರುಳಿನ ಕ್ಯಾನ್ಸರ್ ಸೇರಿದಂತೆ ಕೆಲವು ರೀತಿಯ ಕ್ಯಾನ್ಸರ್ಗಳಿಗೆ ಆನುವಂಶಿಕತೆಯು ಕಾರಣವಾಗಬಹುದು ಎಂದು ಹೇಳುತ್ತಾರೆ.
ಅನಾರೋಗ್ಯಕರ ಜೀವನಶೈಲಿಯೇ ದೊಡ್ಡ ಕಾರಣ:
ಪ್ರಸ್ತುತ ಜಡ ಮತ್ತು ಅನಾರೋಗ್ಯಕರ ಜೀವನಶೈಲಿಯು ಯುವಕರಲ್ಲಿ ಮಾತ್ರವಲ್ಲದೆ ಮಹಿಳೆಯರು ಮತ್ತು ಎಲ್ಲಾ ವಯಸ್ಸಿನ ಪುರುಷರಲ್ಲಿಯೂ ಹೆಚ್ಚುತ್ತಿರುವ ಕ್ಯಾನ್ಸರ್ ಸಂಭವಕ್ಕೆ ಕಾರಣವಾಗಿದೆ.
ಇಂಟರ್ನ್ಯಾಷನಲ್ ಯೂನಿಯನ್ ಅಗೇನ್ಸ್ಟ್ ಕ್ಯಾನ್ಸರ್ (ಯುಐಸಿಸಿ) ಪ್ರಕಾರ, ಕ್ಯಾನ್ಸರ್ ಪೀಡಿತ ಮೂವರಲ್ಲಿ ಒಬ್ಬರು ಅವರ ಅನಾರೋಗ್ಯಕರ ಜೀವನಶೈಲಿಯಿಂದಾಗಿ ಕ್ಯಾನ್ಸರ್ಗೆ ತುತ್ತಾಗುತ್ತಾರೆ. ಇಂದಿನ ಯುಗದಲ್ಲಿ ಹೆಚ್ಚಿನ ಜನರು ಶಿಸ್ತುರಹಿತ ಜೀವನಶೈಲಿಗೆ ಒಗ್ಗಿಕೊಂಡಿರುತ್ತಾರೆ. ನಿದ್ರೆ ಮತ್ತು ಎಚ್ಚರಗೊಳ್ಳಲು ನಿಗದಿತ ಸಮಯವಿರುವುದಿಲ್ಲ, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದಿಲ್ಲ ಮತ್ತು ಹೆಚ್ಚಿನ ಜನರು ಯಾವುದೇ ರೀತಿಯ ದೈಹಿಕ ಚಟುವಟಿಕೆಗಳಿಂದ ಅಥವಾ ವ್ಯಾಯಾಮದಿಂದ ದೂರವಿರುತ್ತಾರೆ.
ಇದಲ್ಲದೆ, ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಇತ್ತೀಚಿನ ದಿನಗಳಲ್ಲಿ ಧೂಮಪಾನ ಹಾಗೂ ಡ್ರಗ್ಸ್ ಸೇವನೆ ಯುವಕರಲ್ಲಿ ಫ್ಯಾಷನ್ ಆಗಿ ಮಾರ್ಪಟ್ಟಿದೆ. ಕೆಲವು ಜನರು ಒತ್ತಡದಿಂದಾಗಿ ಅಥವಾ ನಿರ್ದಿಷ್ಟ ಗುಂಪಿನ ಜನರೊಂದಿಗೆ ಭಾಗಿಯಾಗಲು ಅಥವಾ ಗುರುತಿಸಿಕೊಳ್ಳಲು ಇಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ.
ದೇಹದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಹರಡಲು ಇದು ಕಾರಣವಾಗಬಹುದು ಮತ್ತು ಇತರ ಗಂಭೀರ ಪರಿಸ್ಥಿತಿಗಳಿಗೂ ಕಾರಣವಾಗಬಹುದು ಅಥವಾ ಅರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.
ಆಹಾರ ಪದ್ಧತಿ:
ಜೀವನಶೈಲಿಯ ಹೊರತಾಗಿ, ನಮ್ಮ ಆಹಾರ ಮತ್ತು ಆಹಾರ ಪದ್ಧತಿ ಕೂಡ ಕ್ಯಾನ್ಸರ್ಗೆ ಕಾರಣವಾಗಬಹುದು. ಕ್ಯಾನ್ಸರ್ ನಾವು ತಿನ್ನುವ ಆಹಾರ ಮತ್ತು ಅದನ್ನು ಎಷ್ಟು ಚೆನ್ನಾಗಿ ಬೇಯಿಸುತ್ತೇವೆ ಎಂಬುವುದಕ್ಕೆ ನೇರವಾಗಿ ಸಂಬಂಧಿಸಿದೆ.
ಉದಾಹರಣೆಗೆ ಹೆಚ್ಚಿನ ತಾಪಮಾನದಲ್ಲಿ ಹಂದಿಮಾಂಸ, ಗೋಮಾಂಸ ಅಥವಾ ಕಾಡು ಹಂದಿಯ ಮಾಂಸದಂತಹ ಆಹಾರವನ್ನು ಬಿಸಿ ಮಾಡುವುದು ಅಥವಾ ಅವುಗಳನ್ನು ಮತ್ತೆ ಮತ್ತೆ ಬಿಸಿ ಮಾಡಿ ಸೇವಿಸುವುದರಿಂದ ವ್ಯಕ್ತಿಯಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ.
ಪ್ರಸ್ತುತ ಕಾಲದಲ್ಲಿ, ಮಕ್ಕಳು ಮಾತ್ರವಲ್ಲ, ಯುವ ವಯಸ್ಕರು ಕೂಡ ಚೀಸ್ನಂತಹ ಸಂಸ್ಕರಿಸಿದ ಆಹಾರಗಳನ್ನು ಇಷ್ಟಪಡುತ್ತಾರೆ ಅಥವಾ ಕಾರ್ಬೊನೇಟೆಡ್ ಪಾನೀಯಗಳು ಮತ್ತು ಇತರ ಜಂಕ್ ಫುಡ್‌ಗಳಂತಹ ಸಕ್ಕರೆ ಮತ್ತು ಕೊಬ್ಬಿನಂಶವನ್ನು ಹೆಚ್ಚು ಇಷ್ಟಪಡುತ್ತಾರೆ. ಅವು ಕ್ಯಾನ್ಸರ್ ಮಾತ್ರವಲ್ಲ ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕೊಮೊರ್ಬಿಡಿಟಿಗಳ ಅಪಾಯವನ್ನು ಹೆಚ್ಚಿಸುತ್ತವೆ. ಇದು ಕ್ಯಾನ್ಸರ್ ಚಿಕಿತ್ಸೆಯನ್ನು ಸಾಕಷ್ಟು ತೊಂದರೆಗೊಳಗಾಗಿಸುತ್ತದೆ.
ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸದೇ ಇರುವುದು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ, ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಯುವಕರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರವೃತ್ತಿಯನ್ನು ನಿಗ್ರಹಿಸುವುದು ಬಹಳ ಮುಖ್ಯವಾಗಿದ್ದು, ಅನಾರೋಗ್ಯಕರ ಅಭ್ಯಾಸದಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆಯು ಎಲ್ಲರೂ ತಿಳಿದಿರಬೇಕು ಮತ್ತು ಜಾಗರೂಕರಾಗಿರಬೇಕು.
ಯುವಕರಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳ ಎಲ್ಲಾ ಕಾರಣಗಳನ್ನು ತಿಳಿಯಲು, ಅವರ ವ್ಯಾಯಾಮ, ಆಹಾರ ಪದ್ಧತಿ ಮತ್ತು ಜೀವನಶೈಲಿಯ ಅಭ್ಯಾಸಗಳ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ತಜ್ಞರು ಹೇಳುತ್ತಾರೆ.