ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ದೇಶದಲ್ಲಿನ ಕೋವಿಡ್ ಪರಿಸ್ಥಿತಿಯ ಬಗ್ಗೆ ಪರಿಶೀಲನಾ ಸಭೆ ನಡೆಯಿತು. ಕೇರಳ, ಮಹಾರಾಷ್ಟ್ರ, ದೆಹಲಿ, ಕರ್ನಾಟಕ, ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಹರಿಯಾಣ ಸೇರಿದಂತೆ ದೇಶದ ಏಳು ರಾಜ್ಯಗಳಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಹಾಗೂ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಯಿತು.
ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರೊಂದಿಗಿನ ಸಭೆಯಲ್ಲಿ, ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಸಚಿವ ಮಾಂಡವಿಯಾ ಒತ್ತಿ ಹೇಳಿದರು. ಅಗತ್ಯ ಔಷಧಿಗಳ ಸಾಕಷ್ಟು ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಗೊತ್ತುಪಡಿಸಿದ ಆಸ್ಪತ್ರೆಯ ಹಾಸಿಗೆಗಳ ಲಭ್ಯತೆ ಸೇರಿದಂತೆ ಎಲ್ಲಾ ಲಾಜಿಸ್ಟಿಕ್ಸ್ ಮತ್ತು ಮೂಲ ಸೌಕರ್ಯಗಳ ಸಿದ್ಧತೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವಂತೆ ರಾಜ್ಯ ಆರೋಗ್ಯ ಮಂತ್ರಿಗಳಿಗೆ ಸಲಹೆ ನೀಡಲಾಯಿತು.
ನಿರ್ದಿಷ್ಟ ವೆಬ್ ಪೋರ್ಟಲ್‌ನಲ್ಲಿ ತಮ್ಮ ಕೋವಿಡ್ ಡೇಟಾವನ್ನು ನಿಯಮಿತವಾಗಿ ಅಪ್ಡೇಟ್ ಮಾಡುವಂತೆ ಇದೇ ಸಂದರ್ಭದಲ್ಲಿ ರಾಜ್ಯಗಳಿಗೆ ತಿಳಿಸಲಾಯಿತು. ಸಭೆಯಲ್ಲಿ ದೇಶದಲ್ಲಿ ಪರಿಸ್ಥಿತಿಯ ಜೊತೆಗೆ ಜಾಗತಿಕ ಕೋವಿಡ್ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಯಿತು. ಮಾರ್ಚ್ 25 ರಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ICMR ಹೊರಡಿಸಿದ ಜಂಟಿ ಸಲಹೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೊಮ್ಮೆ ಸಭೆಯಲ್ಲಿ ನೀಡಲಾಯಿತು. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 6,050 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಶುಕ್ರವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 28,303 ರಷ್ಟಿದೆ.