ನವದೆಹಲಿ: 2021-22 ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಇಂದು (ಜುಲೈ 31) ಕೊನೆಯ ದಿನಾಂಕ. ಇದರ ನಡುವೆ ಅನೇಕ ತೆರಿಗೆದಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗಡುವು ವಿಸ್ತರಿಸಬೇಕೆನ್ನುವ ಒತ್ತಾಯಗಳು ಕೇಳಿ ಬರುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಐಟಿ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ. ಒಂದು ವೇಳೆ ಜುಲೈ 31 ರ ಮೊದಲು ನೀವು ಐಟಿಆರ್ ಸಲ್ಲಿಸಲು ವಿಫಲವಾದರೆ ಏನಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಗಡುವು ಮುಗಿದ ಬಳಿಕವೂ ತಡವಾಗಿ ಈ ವರ್ಷದ ಡಿಸೆಂಬರ್ 31ರ ವರೆಗೂ ಐಟಿಆರ್ ದಾಖಲಿಸಲು ಅವಕಾಶವಿರುತ್ತದೆ. ಆದರೆ, ದಂಡ ತೆರಬೇಕಾಗುತ್ತದೆ. 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234A ಪ್ರಕಾರ ಬಡ್ಡಿ ಕಟ್ಟಬೇಕು. ವಾರ್ಷಿಕ ಆದಾಯ 5 ಲಕ್ಷ ರೂ.ವರೆಗೆ ಇರುವ ತೆರಿಗೆದಾರರಿಗೆ ವಿಳಂಬ ಶುಲ್ಕ 1,000 ರೂ. ಹಾಗು ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಿದ್ದರೆ 5,000 ರೂಪಾಯಿಯವರೆಗೂ ದಂಡ ವಿಧಿಸಲಾಗುತ್ತದೆ.