ನಾಗ್ಪುರ (ಮಹಾರಾಷ್ಟ್ರ):ಭ್ರಷ್ಟಾಚಾರ ಪ್ರಕರಣ ಸಂಬಂಧ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ನಾಗ್ಪುರದ ನಿವಾಸದ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಿನ್ನೆಯಷ್ಟೇ ಅನಿಲ್ ದೇಶಮುಖ್ರ ವಿಚಾರಣೆ ಸಂಬಂಧದ ದಾಖಲೆಗಳನ್ನು ಸೋರಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಸಿಬಿಐ ಸಬ್ ಇನ್ಸ್‌ಪೆಕ್ಟರ್ ಅಭಿಷೇಕ್ ತಿವಾರಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಸಿಬಿಐಗೆ ನೋಟಿಸ್ ಜಾರಿಗೊಳಿಸಿತ್ತು. ಪ್ರಕರಣ ಸಂಬಂಧ ಈ ಹಿಂದೆ ದೇಶಮುಖ್ ಮತ್ತು ಅವರ ಆಪ್ತರ ನಿವಾಸಗಳಲ್ಲಿ ಐಟಿ ಶೋಧ ನಡೆಸಿತ್ತು. ಇದೀದ ದೇಶಮುಖ್ರ ನಾಗ್ಪುರದ ನಿವಾಸದ ಮೇಲೆ ದಾಳಿ ನಡೆಸಿದೆ.
ಇದನ್ನೂ ಓದಿ: ಅನಿಲ್ ದೇಶಮುಖ್ ವಿಚಾರಣಾ ವರದಿ ಸೋರಿಕೆ: ತನ್ನದೇ ಸಬ್ ಇನ್ಸ್‌ಪೆಕ್ಟರ್, ವಕೀಲರನ್ನು ಬಂಧಿಸಿದ CBI
ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟಕಗಳು ಪತ್ತೆ ಪ್ರಕರಣ ಹಾಗೂ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಸಾವು ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಮಾರ್ಚ್‌ನಲ್ಲಿ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಿದ್ದರು.
ವಿಚಾರಣೆ ವೇಳೆ, ಸಚಿನ್ ವಾಜೆ ಹೇಳಿಕೆ ಹಾಗೂ ಮುಂಬೈನ ಮಾಜಿ ಪೋಲಿಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರ ಆರೋಪದ ಮೇರೆಗೆ ಅನಿಲ್ ದೇಶ್‌ಮುಖ್ ವಿರುದ್ಧ 100 ಕೋಟಿ ರೂ.ಗಳ ಅಕ್ರಮ ಹಣ ವಹಿವಾಟು ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡು ತನಿಖೆ ನಡೆಸುತ್ತಿತ್ತು.