ನವದೆಹಲಿ: ದೇಶದ ವಿವಿಧೆಡೆ ಇರುವ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆ ತಂಡಗಳು ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿಗಳಲ್ಲಿ ಸಮೀಕ್ಷೆ ನಡೆಸುತ್ತಿವೆ. ತೆರಿಗೆ ವಂಚನೆ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆಯು ಮಂಗಳವಾರ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2002 ರಲ್ಲಿ ನಡೆದ ಗುಜರಾತ್ ಗಲಭೆಗಳ ಕುರಿತಾಗಿ ಎರಡು ಕಂತುಗಳಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಬಿಸಿ ಪ್ರಸಾರ ಮಾಡಿತ್ತು. ಇದಾಗಿ ಎರಡು ವಾರಗಳ ನಂತರ ಭಾರತದಲ್ಲಿರುವ ಅದರ ಕಚೇರಿಗಳ ಮೇಲೆ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳು ಮತ್ತು ಅದರ ಭಾರತೀಯ ಘಟಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ತೆರಿಗೆ ಸಮೀಕ್ಷೆಯ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆಯು ಕಂಪನಿಯ ವ್ಯವಹಾರ ನಡೆಯುವ ಆವರಣವನ್ನು ಮಾತ್ರ ಪರಿಶೀಲಿಸುತ್ತದೆ. ಅದರ ಪ್ರವರ್ತಕರು ಅಥವಾ ನಿರ್ದೇಶಕರ ನಿವಾಸಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ.
ಐಟಿ ದಾಳಿ ಬಗ್ಗೆ ಕಾಂಗ್ರೆಸ್ ಟೀಕೆ.. ಟ್ವೀಟ್:ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ. ಆದಾಯ ತೆರಿಗೆ ಸಮೀಕ್ಷೆಯನ್ನು ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಕಾಂಗ್ರೆಸ್ ತಳಕು ಹಾಕಲು ಪ್ರಯತ್ನಿಸಿದೆ. ಮೊದಲು ಬಿಬಿಸಿ ಸಾಕ್ಷ್ಯಚಿತ್ರ ಬಂದಿತು, ಅದನ್ನು ನಿಷೇಧಿಸಲಾಯಿತು. ಇದೀಗ ಬಿಬಿಸಿ ಮೇಲೆ ಐಟಿ ದಾಳಿ ನಡೆದಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಮತ್ತೊಂದೆಡೆ ಮಹುವಾ ಮೊಯಿತ್ರಾ ಕೂಡ ಟ್ವೀಟ್ ಮಾಡಿದ್ದಾರೆ. ಬಿಬಿಸಿಯ ದೆಹಲಿ ಕಚೇರಿಯಲ್ಲಿ ಆದಾಯ ತೆರಿಗೆ ದಾಳಿಯ ಸುದ್ದಿ ಬಂದಿದೆ. ತುಂಬಾ ಚೆನ್ನಾಗಿದೆ. ಇದು ಅನಿರೀಕ್ಷಿತ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.