ರೋಹ್ಟಾಸ್ (ಬಿಹಾರ):ಒಬ್ಬ ಸಾಮಾನ್ಯ ಕಾರ್ಮಿಕನಿಗೆ ಅಬ್ಬಬ್ಬಾ ಅಂದ್ರೂ ತಿಂಗಳಿಗೆ 15 ಸಾವಿರ ದುಡಿಮೆಯ ಹಣ ಬಂದೀತು. ಇದಕ್ಕೆ ಆತ ಅದ್ಯಾವ ತೆರಿಗೆ ತಾನೇ ಕಟ್ಟಿಯಾನು. ಇಷ್ಟೇ ಪ್ರಮಾಣದಲ್ಲಿ ದುಡಿಯುವ ಬಿಹಾರದ ಕಾರ್ಮಿಕನಿಗೆ ಆದಾಯ ತೆರಿಗೆ ಇಲಾಖೆ (ಐಟಿ) ಶಾಕ್ ನೀಡಿದೆ. ತೆರಿಗೆ ವಂಚಿಸಿದ ಆರೋಪದ ಮೇಲೆ 14 ಕೋಟಿ ರೂಪಾಯಿ ಕಟ್ಟಲು ನೋಟಿಸ್ ನೀಡಿದೆ. ನೋಟಿಸ್ ನೋಡಿದ ಕಾರ್ಮಿಕನಿಗೆ ಬರಸಿಡಿಲು ಬಡಿದಂತಾಗಿದೆ.
ನಿಜ, ಬಿಹಾರದ ಕಟ್ಟಡ ಕಾರ್ಮಿಕ ಮನೋಜ್ ಕುಮಾರ್ ಎಂಬಾತನಿಗೆ ಐಟಿ ಇಲಾಖೆ ತೆರಿಗೆ ವಂಚನೆ ಆರೋಪದ ಮೇಲೆ 14 ಕೋಟಿ ರೂಪಾಯಿ ಪಾವತಿಸಲು ಸೂಚಿಸಿ ನೋಟಿಸ್ ನೀಡಿದೆ. ಇದನ್ನು ಕಂಡ ಕಾರ್ಮಿಕ ಅವಾಕ್ಕಾಗಿದ್ದಾನೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿದ ಕಾರಣ ಕಾರ್ಮಿಕನ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾರ್ಮಿಕ ತಾನು ಕಟ್ಟಡ ಕಾರ್ಮಿಕನಾಗಿದ್ದು, ಮಾಸಿಕ 12 ರಿಂದ 15 ಸಾವಿರ ದುಡಿಯುತ್ತೇನೆ ಎಂದು ತಿಳಿಸಿದ್ದಾನೆ.