ನವದೆಹಲಿ/ಲಂಡನ್: ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಸಿಸಿ ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಗಳಿಗೆ ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ಹೇಳಿದೆ.
2002ರಲ್ಲಿ ಗುಜರಾತ್ ಗಲಭೆ ಕುರಿತು ಇತ್ತೀಚಿಗೆ ಬಿಬಿಸಿ ಚಿತ್ರಿಸಿದ 'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಎಂಬ ಸಾಕ್ಷ್ಯಚಿತ್ರವು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಅಲ್ಲದೇ, ಭಾರತದಲ್ಲಿ ಇದರ ಪ್ರಸಾರಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿತ್ತು. ಇದರ ಬೆಳವಣಿಗೆ ನಂತರ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ಐಟಿ ದಾಳಿ ಮಾಡಿದೆ. ಈ ಕುರಿತು ಲಂಡನ್ನ ಬಿಬಿಸಿ ಮುಖ್ಯ ಕಚೇರಿ ಟ್ವೀಟ್ ಮಾಡಿದ್ದು, ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇದ್ದಾರೆ. ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದೂ ನಾವು ಭಾವಿಸುತ್ತೇವೆ ಎಂದು ಟ್ವೀಟ್ ಮಾಡಿದೆ.
ಭಾರತದ ವಿರುದ್ಧ ದ್ವೇಷಪೂರಿತ ವರದಿ - ಬಿಜೆಪಿ: ಮತ್ತೊಂದೆಡೆ, ಐಟಿ ದಾಳಿ ವಿಷಯವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಬಿಜೆಪಿಯು ಟೀಕೆಗೆ ಭಯ ಪಡುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ. ಇದೇ ವೇಳೆ ಕೇಂದ್ರದ ಆಡಳಿತಾರೂಢ ಬಿಜೆಪಿ ಸಹ ಪ್ರತಿಕ್ರಿಯೆ ನೀಡಿದ್ದು, ಭಾರತದ ವಿರುದ್ಧ ಬಿಬಿಸಿ ದ್ವೇಷಪೂರಿತ ವರದಿಯನ್ನು ಬಿಡುಗಡೆ ಮಾಡಿದೆ. ಅಲ್ಲದೇ, ಬಿಬಿಸಿಯ ಅಪ್ರಚಾರ ಮತ್ತು ಕಾಂಗ್ರೆಸ್‌ನ ಅಜೆಂಡಾ ಒಟ್ಟಿಗೆ ಸಾಗುತ್ತಿವೆ ಎಂದು ಆರೋಪಿಸಿದೆ.