ಕರ್ನಾಟಕ

karnataka

ಕಾರ್ಮಿಕನ ಮಗನಿಗೆ 2.40 ಕೋಟಿ ಮೌಲ್ಯದ ಆದಾಯ ಪ್ರಮಾಣಪತ್ರ ನೀಡಿದ ತಹಶೀಲ್ದಾರ್: ಮುಂದೇನಾಯ್ತು?

By ETV Bharat Karnataka Team

Published : Oct 4, 2023, 9:44 AM IST

ಮಿರ್ಜಾಪುರದಲ್ಲಿ 2.40 ಕೋಟಿ ಮೌಲ್ಯದ ಆದಾಯ ಪ್ರಮಾಣ ಪತ್ರವನ್ನು ಕಾರ್ಮಿಕನ ಮಗನಿಗೆ ತಹಶೀಲ್ದಾರ್ ಕಚೇರಿ ನೀಡಿರುವ ವಿಚಾರ ಸಂಚಲನ ಮೂಡಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಆದಾಯ ಪ್ರಮಾಣ ಪತ್ರ ರದ್ದುಗೊಳಿಸಲಾಗಿದೆ.

Income certificate
ಆದಾಯ ಪ್ರಮಾಣಪತ್ರ

ಮಿರ್ಜಾಪುರ (ಉತ್ತರ ಪ್ರದೇಶ) : ಕೂಲಿ ಕಾರ್ಮಿಕರೊಬ್ಬರ ಮಗನಿಗೆ ತಹಶೀಲ್ದಾರ್​ ಕಚೇರಿ ವತಿಯಿಂದ 2.40 ಕೋಟಿ ರೂ. ಗಳ ಬೃಹತ್ ಆದಾಯ ಪ್ರಮಾಣ ಪತ್ರ ವಿತರಿಸಲಾಗಿದೆ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಸಾರ್ವಜನಿಕ ವಯಲದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಕ್ಕ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಹೌದು, ಕೂಲಿ ಕಾರ್ಮಿಕನ ಮಗ ಬಿ ಫಾರ್ಮಾ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್‌ನಲ್ಲಿ ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾಮ ಲೆಕ್ಕಿಗರ ನಿರ್ಲಕ್ಷ್ಯದಿಂದ ಅಧಿಕ ಆದಾಯದ ಪ್ರಮಾಣ ಪತ್ರ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್, ಆದಾಯ ಪ್ರಮಾಣ ಪತ್ರ ರದ್ದುಗೊಳಿಸಿದ್ದಾರೆ. ಮತ್ತೊಮ್ಮೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ :ಆದಾಯ ಪ್ರಮಾಣ ಪತ್ರಕ್ಕಾಗಿ ಲಂಚ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಅತ್ಯಂತ ಹಿಂದುಳಿದ ಬ್ಲಾಕ್ ಹಲಿಯಾ ಸಹಜಿ ಗ್ರಾಮದ ನಿವಾಸಿ ಹಾಗೂ ಕೂಲಿ ಕಾರ್ಮಿಕ ರಾಮದಾಸ್ ಅವರ ಪುತ್ರ ಬ್ರಿಜೇಶ್ ಕುಮಾರ್ ಆಗ್ರಾದಲ್ಲಿ ಬಿ ಫಾರ್ಮಾ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಹಜಿ ಗ್ರಾಮದ ಲೆಕ್ಕಾಧಿಕಾರಿ ಪತ್ರದಲ್ಲಿ ವಾರ್ಷಿಕ 2.40 ಕೋಟಿ ರೂ. ಆದಾಯ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ತಹಶೀಲ್ದಾರ್ ಆಶಿಶ್ ಕುಮಾರ್ ಪಾಂಡೆ ಅವರ ಡಿಜಿಟಲ್ ಸಹಿಯೊಂದಿಗೆ ವಿದ್ಯಾರ್ಥಿ, ಈ ಪ್ರಮಾಣಪತ್ರವನ್ನು ಪಡೆದಿದ್ದು, ವಿಷಯ ತಿಳಿದ ಮನೆಯವರು ಆತಂಕಗೊಂಡಿದ್ದರು. ಘಟನೆ ಬೆಳಕಿಗೆ ಬಂದ ನಂತರ ತಹಶೀಲ್ದಾರ್ ಅವರು ವಿದ್ಯಾರ್ಥಿಯ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದಾರೆ. ಅಲ್ಲದೇ, ಮತ್ತೊಮ್ಮೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ :ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟು .. ಇರೋದು ಬಿಟ್ಟು ಬೇರೆ ಜಾತಿ ಪ್ರಮಾಣ ಪತ್ರ ..

ಈ ಬಗ್ಗೆ ಅಕೌಂಟೆಂಟ್ ರಾಮರಾಜ್ ಪಾಲ್ ನೀಡಿದ ಮಾಹಿತಿ ಪ್ರಕಾರ, "ವಿದ್ಯಾರ್ಥಿಯು ಆದಾಯ ಪ್ರಮಾಣ ಪತ್ರ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಪೋರ್ಟಲ್‌ಗೆ ಅಪ್ಲೋಡ್​ ಮಾಡುವಾಗ 2 ಕೋಟಿ 40 ಲಕ್ಷದ ನಾಲ್ಕು ನೂರ ಎಪ್ಪತ್ತು ರೂಪಾಯಿ ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ನಂತರ ನೀಡಲಾದ ಆದಾಯ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗೆ ಎರಡನೇ ಆದಾಯ ಪ್ರಮಾಣ ಪತ್ರ ನೀಡಲಾಗುವುದು" ಎಂದರು.

ಇದನ್ನೂ ಓದಿ :ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ : ಜಾತಿ ಪ್ರಮಾಣ ಪತ್ರ ವಿಚಾರಕ್ಕೆ ತಹಶೀಲ್ದಾರ್​ ಜೊತೆ ವಾಗ್ವಾದ

ಶಿವಮೊಗ್ಗದ ತಹಶೀಲ್ದಾರ್ ಅಮಾನತು :ಇನ್ನು ಅಕ್ರಮ ಆಸ್ತಿ ಹೊಂದಿದ ಆರೋಪದ ಮೇರೆಗೆ ಕಳೆದ ಸೆಪ್ಟೆಂಬರ್​ 13 ರಂದು ಶಿವಮೊಗ್ಗದ ತಹಶೀಲ್ದಾರ್ ಎನ್‌.ಜಿ.ನಾಗರಾಜ್ ​ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ತಮ್ಮ ಸೇವಾವಧಿಯಲ್ಲಿ ಅಕ್ರಮ ಆಸ್ತಿ ಗಳಿಸಿದ ಗಂಭೀರ ಆರೋಪದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ತನಿಖೆಯ ವೇಳೆ ಆರೋಪ ಮೇಲ್ನೋಟಕ್ಕೆ ಸಾಬೀತಾಗಿತ್ತು. ಹೀಗಾಗಿ, ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು.

ಇದನ್ನೂ ಓದಿ :ಅಕ್ರಮ‌ ಆಸ್ತಿ ಗಳಿಕೆ: ಶಿವಮೊಗ್ಗ ತಹಶೀಲ್ದಾರ್ ಅಮಾನತು

ABOUT THE AUTHOR

...view details