ಹೈದರಾಬಾದ್ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬದ 6 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಸ್ವತಃ ಶಿಲ್ಪಾ ಶೆಟ್ಟಿ ತಮ್ಮ ಅಧಿಕೃತ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಕುಟುಂಬ ಕಳೆದ 10 ದಿನದಿಂದ ತೀವ್ರ ಸಂಕಷ್ಟ ಅನುಭವಿಸಿದೆ. ನನ್ನ ಅತ್ತೆ, ಮಾವನಿಗೆ ಮೊದಲು ಕೋವಿಡ್ ದೃಢಪಟ್ಟಿತ್ತು. ಇದಾದ ಬಳಿಕ ಮಕ್ಕಳಾದ ಸಮೀಶಾ, ವಿಯಾನ್ ರಾಜ್, ನನ್ನ ಅಮ್ಮ ಹಾಗೂ ರಾಜ್ ಕುಂದ್ರಾಗೂ ಕೋವಿಡ್ ದೃಢಪಟ್ಟಿದೆ ಎಂದಿದ್ದಾರೆ.
ವೈದ್ಯರ ಸಲಹೆ ಮೇಲೆ ಅವರೆಲ್ಲರೂ ಮನೆಯೊಳಗೇ ಪ್ರತ್ಯೇಕ ಕೋಣೆಯಲ್ಲಿದ್ದಾರೆ. ಮನೆಯಲ್ಲಿ ಕೆಲಸಕ್ಕಿದ್ದ ಇಬ್ಬರು ಸಿಬ್ಬಂದಿಗೂ ಕೋವಿಡ್ ದೃಢಪಟ್ಟಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಗುಣಮುಖರಾಗುತ್ತಿದ್ದಾರೆ ಎಂದು ಶಿಲ್ಪಾ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ನಾನು ಕೂಡ ಕೋವಿಡ್ ಪರೀಕ್ಷೆಗೊಳಪಟ್ಟಿದ್ದು, ನೆಗೆಟಿವ್ ಬಂದಿದೆ. ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ಧನ್ಯವಾದ. ಎಲ್ಲರೂ ಮಾಸ್ಕ್ ಧರಿಸಿ, ಕೈಗಳನ್ನು ಸ್ವಚ್ಛಗೊಳಿಸಿ ಹಾಗೂ ಸುರಕ್ಷಿತವಾಗಿರಿ. ನಿಮಗೆ ಕೋವಿಡ್ ಪಾಸಿಟಿವ್ ಆಗಲಿ ಆಗದೇ ಇರಲಿ ಮಾನಸಿಕವಾಗಿ ಸದೃಢವಾಗಿರಿ ಎಂದು ಪೋಸ್ಟ್ ಮಾಡಿದ್ದಾರೆ.