ನವದೆಹಲಿ:ದೆಹಲಿಯಲ್ಲಿ ಮತ್ತೊಮ್ಮೆ ಹೃದಯ ವಿದ್ರಾವಕ ಘಟನೆಯೊಂದು ನಡೆದ ಬಗ್ಗೆ ವರದಿಯಾಗಿದೆ. ಯುವತಿಯೊಬ್ಬಳನ್ನು ಕೊಂದು ಆಕೆಯ ಶವವನ್ನು ಫ್ರಿಜ್ನಲ್ಲಿಟ್ಟ ಪ್ರಕರಣ ಇದಾಗಿದೆ. ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡವು ಪಶ್ಚಿಮ ದೆಹಲಿಯ ಹರಿದಾಸ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಢಾಬಾದಿಂದ ಯುವತಿಯ ಶವ ವಶಪಡಿಸಿಕೊಂಡಿದೆ. ಯುವತಿಯ ಮೃತ ದೇಹವನ್ನು ಢಾಬಾದ ಫ್ರಿಜ್ನಲ್ಲಿ ಇರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು ಮಿತ್ರಾನ್ ಗ್ರಾಮದ ನಿವಾಸಿ ಸಾಹಿಲ್ ಗೆಹ್ಲೋಟ್ ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ.. ಪೊಲೀಸರು ಹೇಳುವುದೇನು?:ಘಟನೆಯ ಬಗ್ಗೆ ಮಾಹಿತಿ ನೀಡಿದ ಹೆಚ್ಚುವರಿ ಡಿಸಿಪಿ ವಿಕ್ರಮ್ ಸಿಂಗ್, ಯುವತಿ ಮತ್ತು ಯುವಕ ಇಬ್ಬರೂ ಪ್ರೇಮ ಸಂಬಂಧ ಹೊಂದಿದ್ದರು. ಆದರೆ, ಯುವತಿಯೊಂದಿಗೆ ಮದುವೆಯಾಗಲು ಯುವಕ ಒಪ್ಪಿರಲಿಲ್ಲ. ಇದೇ ವಿಷಯಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಯುವತಿ ತನ್ನ ಪ್ರಿಯಕರನಿಗೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಇದೇ ಕಾರಣಕ್ಕೆ ಪ್ರೇಮಿ ಯುವಕ ಅವಳನ್ನು ಕೊಂದಿದ್ದಾನೆ. ನಂತರ ಆರೋಪಿಯು ಮೃತದೇಹವನ್ನು ಮಿತ್ರಾನ್ ಗ್ರಾಮದ ಢಾಬಾದಲ್ಲಿ ಬಚ್ಚಿಟ್ಟಿದ್ದ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸಾಹಿಲ್ ಗೆಹ್ಲೋಟ್ ಈತನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ವಿವರ ನೋಡುವುದಾದರೆ:ಮೂಲಗಳ ಪ್ರಕಾರ ಕೊಲೆಯಾದ ಯುವತಿ ಉತ್ತಮ್ ನಗರ ಪ್ರದೇಶದ ನಿವಾಸಿ. ಆಕೆಯ ಪ್ರಿಯಕರನಾಗಿದ್ದ ಯುವಕನ ಮದುವೆ ಫೆಬ್ರವರಿ 10 ರಂದು ನಡೆಯಲಿತ್ತು. ಈ ಮಧ್ಯೆ ತನ್ನನ್ನೇ ಮದುವೆಯಾಗುವಂತೆ ಯುವತಿ ಹಟ ಹಿಡಿದಿದ್ದರಿಂದ ಯುವ ಗಾಬರಿಯಾಗಿದ್ದ. ಆಕೆ ತನ್ನ ಮದುವೆಗೆ ಅಡ್ಡಿಯಾಗಬಹುದು ಎಂಬ ಶಂಕೆಯಿಂದ ಕೊನೆಗೆ ಆಕೆಯನ್ನು ಕೊಲೆ ಮಾಡಿದ್ದಾನೆ. ನಂತರ ಆಕೆಯ ಶವವನ್ನು ಗ್ರಾಮದಿಂದ ದೂರದಲ್ಲಿರುವ ಢಾಬಾದ ರೆಫ್ರಿಜರೇಟರ್‌ನಲ್ಲಿ ಬಚ್ಚಿಟ್ಟಿದ್ದಾನೆ.