ನವದೆಹಲಿ : ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ದುರದೃಷ್ಟಕರ ಮತ್ತು ಮಾಜಿ ಪ್ರಧಾನಿಯನ್ನು ಅವಮಾನಿಸುವ ಪ್ರಯತ್ನ ಎಂದು ಆರೋಪಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಐಎನ್ಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ, ಖೇಲ್ ರತ್ನ ಪ್ರಶಸ್ತಿಗೆ 'ಹಾಕಿ ಕಾ 'ಜಾದುಗಾರ' ಎಂದು ಕರೆಯಲ್ಪಡುವ ಪ್ರಸಿದ್ಧ ಕ್ರೀಡಾಪಟುಗಳಲ್ಲಿ ಒಬ್ಬರಾದ ಮೇಜರ್ ಧ್ಯಾನ್ ಚಂದ್ ಹೆಸರು ಇಟ್ಟಿರುವುದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ, ಮೋದಿಯವರು ಒಬ್ಬ ಪ್ರಸಿದ್ಧ ಆಟಗಾರನ ಹೆಸರನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದಿಲ್ಲ ಎಂದು ನಾವು ನಂಬಿದ್ದೇವೆ ಎಂದಿದ್ದಾರೆ.
ಓದಿ : ಧ್ಯಾನಚಂದ್ ಹೆಸರಲ್ಲಿ ಪ್ರತ್ಯೇಕ ಪ್ರಶಸ್ತಿ ಸ್ಥಾಪಿಸಿದ್ದರೆ ತುಂಬಾ ಅನುಕೂಲವಾಗುತ್ತಿತ್ತು: ಮೊಹಮದ್ ರಿಯಾಜ್
ಈಗ ಹೊಸ ಆರಂಭವನ್ನು ಮಾಡಲಾಗಿದೆ. ಮೋದಿಯವರು, ನರೇಂದ್ರ ಮೋದಿ ಕ್ರೀಡಾಂಗಣ ಮತ್ತು ಅರುಣ್ ಜೇಟ್ಲಿ ಕ್ರೀಡಾಂಗಣದ ಹೆಸರನ್ನು ಬದಲಾಯಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಈ ಕ್ರೀಡಾಂಗಣಗಳಿಗೆ ಪ್ರಸಿದ್ಧ ಕ್ರೀಡಾಪಟುಗಳಾದ ಸರ್ಧಾರ್ ಮಿಲ್ಕಾ ಸಿಂಗ್, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಲಿಯಾಂಡರ್ ಪೇಸ್, ಪಿ ಟಿ ಉಷಾ, ಮೇರಿ ಕೋಮ್, ಅಭಿನವ್ ಬಿಂದ್ರಾ ಇವರಲ್ಲಿ ಒಬ್ಬರ ಹೆಸರು ಇಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಸುರ್ಜೇವಾಲಾ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
2002 ರಿಂದ 'ಕ್ರೀಡಾ ಕ್ಷೇತ್ರದ ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ ಕೊಡಲಾಗ್ತಿದೆ ಎಂದು ನೆನಪಿಸಿದ ಸುರ್ಜೇವಾಲ. ಮೋದಿ ಜಿ ಒಲಿಂಪಿಕ್ ವರ್ಷದಲ್ಲಿ ಕ್ರೀಡಾ ಬಜೆಟ್ ಅನ್ನು 30 ಕೋಟಿ ರೂ.ಗಳಿಗೆ ಇಳಿಸಿದ್ದಾರೆ. ಈಗ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಬದಲಾಯಿಸುವ ಮೂಲಕ ರೈತರ ಸಮಸ್ಯೆ, ಹಣದುಬ್ಬರ, ಪೆಗಾಸಸ್ ಸ್ಪೈವೇರ್ ಹಗರಣ ಮತ್ತು ಮೂಲಭೂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.