ನವದೆಹಲಿ: ವಿಶ್ವದ ಅತಿ ಉದ್ದದ ನದಿ ವಿಹಾರ ದೋಣಿ ಎಂವಿ ಗಂಗಾ ವಿಲಾಸ್‌ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾರಣಾಸಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದು ಭಾರತದಲ್ಲಿಯೇ ತಯಾರಾದ ಮೊದಲ ವಿಹಾರ ನೌಕೆಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಗಂಗಾ ನದಿಯಲ್ಲಿ ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಸೇವೆಯ ಆರಂಭವು ಒಂದು ಮೈಲಿಗಲ್ಲಿನ ಕ್ಷಣವಾಗಿದೆ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ ಎಂದು ಹೇಳಿದರು.
ಶುಕ್ರವಾರ ಉದ್ಘಾಟಿಸಲಾದ ಇತರ ಒಳನಾಡು ಜಲಮಾರ್ಗ ಯೋಜನೆಗಳನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಇದು ಪೂರ್ವ ಭಾರತದಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸುತ್ತದೆ ಎಂದು ಹೇಳಿದರು. ಭಾರತವು ನೀವು ಊಹಿಸಬಹುದಾದ ಎಲ್ಲವನ್ನೂ ಹೊಂದಿದೆ. ಇದು ನಿಮ್ಮ ಕಲ್ಪನೆಗೆ ಮೀರಿದ ಬಹಳಷ್ಟು ವಿಷಯಗಳನ್ನು ಹೊಂದಿದೆ. ಭಾರತವನ್ನು ಪದಗಳಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಭಾರತವನ್ನು ಹೃದಯದಿಂದ ಮಾತ್ರ ಅನುಭವಿಸಬಹುದು. ಏಕೆಂದರೆ ಭಾರತವು ತನ್ನ ಹೃದಯವನ್ನು ಎಲ್ಲರಿಗೂ ಮುಕ್ತವಾಗಿರಿಸಿದೆ ಎಂದು ಪ್ರಧಾನಿ ಮೋದಿ ವಿಶ್ವದ ಅತಿ ಉದ್ದದ ನದಿ ವಿಹಾರ ನೌಕೆಯಲ್ಲಿದ್ದ ಪ್ರಯಾಣಿಕರಿಗೆ ಸಂದೇಶ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವರು ಮತ್ತು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇಂದು ವಿಶ್ವದ ಅತ್ಯಂತ ದೀರ್ಘ ಪ್ರಯಾಣ ಎಂದು ವಿಶ್ವದ ನದಿ ವಿಹಾರದ ಇತಿಹಾಸದಲ್ಲಿ ಬರೆಯಲಾಗುವುದು. ಇದು ಯುಪಿ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಮೂಲಕ ದಿಬ್ರುಗಢದವರೆಗೆ ಸಾಗುತ್ತದೆ. ಈ ಪ್ರಯಾಣದ ಮೂಲಕ ಕೇವಲ ಒಂದು ಜಲಮಾರ್ಗವಲ್ಲದೆ ಪ್ರವಾಸೋದ್ಯಮ ಹಾಗೂ ವ್ಯಾಪಾರದ ಮಾರ್ಗಗಳು ತೆರೆಯಲಿವೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಹೇಳಿದರು.