ಮುಂಬೈ:ನ್ಯಾಯಾಂಗ ಬಂಧನದಲ್ಲಿದ್ದ ಒಂದು ವಾರದ ನಂತರ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮಧ್ಯಂತರ ಜಾಮೀನು ಪಡೆದು ಹೊರ ಬಂದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಉದ್ಧವ್ ಠಾಕ್ರೆ, ನನ್ನ ಮಾತು ಕೇಳಿ, ನೀವು ಸೋತಿದ್ದೀರಿ.. ನೀವು ಸೋಲಲ್ಪಟ್ಟಿದ್ದೀರಿ" ಎಂದು ಅರ್ನಬ್ ತಮ್ಮ ರಿಪಬ್ಲಿಕ್ ಟಿವಿ ಚಾನಲ್ನಲ್ಲಿ ಮಾತನಾಡಿದ್ದಾರೆ. ಮುಂಬೈ ಬಳಿಯ ತಾಲೋಜ ಜೈಲಿನಿಂದ ರಾತ್ರಿ 8.30ರ ಸುಮಾರಿಗೆ ಬಿಡುಗಡೆಯಾದ ಕೂಡಲೇ, ಪ್ಯಾರಲ್ನಲ್ಲಿರುವ ತಮ್ಮ ಚಾನಲ್‌ನ ಸ್ಟುಡಿಯೋಗೆ ತೆರಳಿದ್ದಾರೆ.
2018ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣದಲ್ಲಿ ನವೆಂಬರ್ 4 ರಂದು 'ಅಕ್ರಮ' ಬಂಧನಕ್ಕಾಗಿ ಅರ್ನಬ್, ಮುಂಬೈ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್ 8 ರಿಂದ ತಾಲೋಜ ಜೈಲಿನಲ್ಲಿದ್ದಾಗ ಮೂರು ಸುತ್ತಿನ ಪೊಲೀಸ್ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.
"ಉದ್ಧವ್ ಠಾಕ್ರೆ, ನೀವು ನನ್ನನ್ನು ಹಳೆಯ, ನಕಲಿ ಪ್ರಕರಣದಲ್ಲಿ ಬಂಧಿಸಿದ್ದೀರಿ ಮತ್ತು ನನ್ನ ಬಳಿ ಕ್ಷಮೆಯಾಚಿಸಲಿಲ್ಲ" ಎಂದು ಗೋಸ್ವಾಮಿ ಹೇಳಿದ್ದಾರೆ. "ಆಟವು ಇದೀಗ ಪ್ರಾರಂಭವಾಗಿದೆ" ಎಂದು ಹೇಳಿದ ಅರ್ನಬ್, ಪ್ರತಿ ಭಾಷೆಯಲ್ಲೂ ರಿಪಬ್ಲಿಕ್ ಟಿವಿ ಚಾನಲ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸಹ ಅಸ್ತಿತ್ವದಲ್ಲಿರಲಿದೆ ಎಂದಿದ್ದಾರೆ.
ಮತ್ತೆ ಬಂಧನಕ್ಕೊಳಗಾಗುವ ಆತಂಕದಲ್ಲಿರುವ ಅರ್ನಾಬ್ "ನಾನು ಜೈಲಿನ ಒಳಗಿನಿಂದಲೂ ಚಾನಲ್‌ಗಳನ್ನು ಪ್ರಾರಂಭಿಸುತ್ತೇನೆ ಮತ್ತು ನೀವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ" ಎಂದು ಗುಡುಗಿದರು. ತನಗೆ ಮಧ್ಯಂತರ ಜಾಮೀನು ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಿದ್ದಾರೆ.