ಸೂರತ್ (ಗುಜರಾತ್):ಕುದುರೆ, ಅಲಂಕಾರಿ ವಾಹನಗಳಲ್ಲಿ ಬಹುತೇಕ ಮದುವೆ ಮೆರವಣಿಗೆಗಳು ನಡೆಯುವುದು ಸಾಮಾನ್ಯ. ಆದ್ರೆ ಇಲ್ಲೊಂದು ಮದುವೆ ಮೆರವಣಿಗೆಯು ಎತ್ತಿನ ಬಂಡಿಯಲ್ಲಿ ನಡೆದಿರುವುದು ವಿಶೇಷ. ನೂರು ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಐಷಾರಾಮಿ ಕಾರ್ಗಳನ್ನು ಬಿಟ್ಟು ಎತ್ತಿನ ಬಂಡಿಯಲ್ಲೇ ವರನ ಮೆರವಣಿಗೆ ನಡೆದಿರುವುದು ವಿನೂತನವೇ ಸರಿ. ಹೌದು, ಇವೆಲ್ಲ ಅಪರೂಪದ ದೃಶ್ಯಗಳು ಕಂಡುಬಂದಿದ್ದು ಸೂರತ್ ನಗರದಲ್ಲಿ.
ಬಿಜೆಪಿ ಮುಖಂಡರೊಬ್ಬರ ಪುತ್ರನ ಮದುವೆ ಮೆರವಣಿಗೆಯು ಅದ್ಧೂರಿಯಾಗಿ ಮತ್ತು ವಿನೂತನವಾಗಿ ನಡೆದಿದೆ. ಈ ಮೆರವಣಿಗೆಯಲ್ಲಿ ಜನರು ವರನನ್ನು ಅಚ್ಚರಿಯಿಂದ ವೀಕ್ಷಿಸಿದರು. ಮದುಮಗನು ಎತ್ತಿನ ಗಾಡಿಯಲ್ಲಿ ವಿವಾಹದ ಸ್ಥಳಕ್ಕೆ ಹೊರಟಿದ್ದ ದೃಶ್ಯವಂತೂ ಎಲ್ಲರನ್ನು ನಿಬ್ಬೆರಗಾಗಿಸಿತು.
ಎತ್ತಿನ ಬಂಡಿಗೆ ಐಷಾರಾಮಿ ಕಾರ್ಗಳ ಬೆಂಗಾವಲು: ವರನಿರುವ ಎತ್ತಿನ ಬಂಡಿಗೆ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರ್ಗಳು ಬೆಂಗಾವಲಾಗಿ ಹೊರಟಂತೆ ಕಾಣಿಸಿದವು. ಈ ಐಷಾರಾಮಿ ಕಾರ್ ಲೈನ್ ಸುಮಾರು 2 ಕಿ.ಮೀ. ಉದ್ದವಿತ್ತು. ಬಹುಶಃ ಮೊಟ್ಟಮೊದಲ ಬಾರಿಗೆ ಗುಜರಾತಿನಲ್ಲಿ ಇಂತಹ ಮೆರವಣಿಗೆ ಕಂಡುಬಂದಿದೆ. ಅದರಲ್ಲೂ ಮದುಮಗನು ಎತ್ತಿನ ಗಾಡಿಯಲ್ಲಿ ಕುಳಿತು ಕೋಟ್ಯಂತರ ರೂಪಾಯಿ ಮೌಲ್ಯದ ಕಾರ್ಗಳೊಂದಿಗೆ ಮೆರವಣಿಗೆ ನಡೆಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಈ ರೀತಿ ಬಹುಶಃ ಚಲನಚಿತ್ರಗಳಲ್ಲಿ ಮಾತ್ರ ಕಾಣಲು ಸಿಗುತ್ತದೆ. ಆದರೆ, ಸೂರತ್‌ನ ವರಾಚಾ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 100ಕ್ಕೂ ಹೆಚ್ಚು ವಾಹನಗಳನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ಕೋಟ್ಯಂತರ ರೂಪಾಯಿ ಮೌಲ್ಯದ ಕಾರ್ಗಳು ಒಂದರ ಹಿಂದೊಂದರಂತೆ ಸಾಗುತ್ತಿದ್ದವು. ಮದುಮಗ ಐಷಾರಾಮಿ ಕಾರ್ಗಳಲ್ಲಿ ಕುಳಿತುಕೊಳ್ಳದೇ, ಎತ್ತಿನ ಗಾಡಿಯಲ್ಲಿ ವಿರಾಜಮಾನವಾಗಿ ಕುಳಿತಿರುವುದು ಕಂಡುಬಂದಿದೆ.