ಬೆಳಗಾವಿ/ಕೊಲ್ಹಾಪುರ:ಇಬ್ಬರು ಸಹೋದರಿಯರ ಪೈಕಿ ಒಬ್ಬರ ಕನ್ಯತ್ವ ಪರೀಕ್ಷೆ ವಿಫಲವಾಯಿತೆಂದು ಇಬ್ಬರನ್ನೂ ಅವರ ಗಂಡಂದಿರು ತವರು ಮನೆಗೆ ಕಳುಹಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
2020 ರ ನವೆಂಬರ್ 27 ರಂದು ಮಹಾರಾಷ್ಟ್ರದ ಕೊಲ್ಹಾಪುರದಿಂದ ಇಬ್ಬರು ಸಹೋದರಿಯರನ್ನು ಬೆಳಗಾವಿಯ ಇಬ್ಬರು ಸಹೋದರರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ಮದುವೆಯಾದ ಮೂರನೇ ದಿನದಂದು ಅತ್ತೆ ಮನೆಯವರು ಇಬ್ಬರು ಸೊಸೆಯಂದಿರನ್ನು ಕನ್ಯತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ.
ನ್ಯಾಯ ಪಂಚಾಯತಿಯಲ್ಲಿ ಆಘಾತಕಾರಿ ತೀರ್ಪು ಇವರಲ್ಲಿ ಒಬ್ಬ ಸೊಸೆಯ ಕನ್ಯತ್ವ ಪರೀಕ್ಷೆ ವಿಫಲವಾಗಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಅತ್ತೆ ಆಕೆಗೆ ಕಿರುಕುಳ ನೀಡುತ್ತಾ ಬಂದಿದ್ದಾರೆ. ಕೆಲ ದಿನಗಳ ನಂತರ ಪತಿರಾಯರು ಹಾಗೂ ಅತ್ತೆ ಸೇರಿಕೊಂಡು ಇಬ್ಬರನ್ನೂ ಕೊಲ್ಹಾಪುರದಲ್ಲಿರುವ ಅವರ ತವರು ಮನೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಪತ್ನಿಯೊಂದಿಗೆ ಲವ್ವಿಡವ್ವಿ; ಸ್ನೇಹಿತನಿಗೆ ದೋಸೆ ತವಾದಲ್ಲಿ ಹಲ್ಲೆ
ಆಘಾತಕಾರಿ ತೀರ್ಪು
ಕೊಲ್ಹಾಪುರದಲ್ಲಿ ಇನ್ನೂ ನ್ಯಾಯ ಪಂಚಾಯತಿ ವ್ಯವಸ್ಥೆ ಜಾರಿಯಲ್ಲಿದ್ದು, ರಾಜಾರಾಂಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಾಲಯವೊಂದರಲ್ಲಿ ಪಂಚಾಯತಿ ಮಾಡಿ, ಈ ಇಬ್ಬರು ಸಹೋದರಿಯರಿಗೂ ಅವರ ಪತಿಯರಿಗೂ ಇನ್ಮುಂದೆ ಯಾವುದೇ ಸಂಬಂಧವಿಲ್ಲ ಎಂಬ ಆಘಾತಕಾರಿ ತೀರ್ಪನ್ನೂ ಗ್ರಾಮದ ಸರ್ಪಂಚ್ (ಮುಖಂಡ) ನೀಡಿದ್ದಾರೆ. ಇಬ್ಬರು ಸಹೋದರರಲ್ಲಿ ಓರ್ವ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮನೆಗೆ ಮರಳಿ ಬಂದರೆ ಇಬ್ಬರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಇದೀಗ ಸಂತ್ರಸ್ತೆಯರು ತಮಗೆ ನ್ಯಾಯ ಕೊಡಿಸುವಂತೆ ಕೋರಿ ಮೂಢನಂಬಿಕೆ ನಿರ್ಮೂಲನಾ ಸಮಿತಿಗೆ ಪತ್ರ ಬರೆದಿದ್ದಾರೆ. ಮೂಢ ನಂಬಿಕೆಗೆ ಗಂಟುಬಿದ್ದು ನವ ವಧುವಿಗೆ ಕಿರುಕುಳ ನೀಡುವಂತಹ ಇಂತಹ ಸಂಪ್ರದಾಯ ಇಂದೂ ಆಚರಣೆಯಲ್ಲಿದೆ ಎಂಬುದು ನೋವಿನ ಸಂಗತಿ. ಈ ಸಂಪ್ರದಾಯಗಳಿಂದಾಗಿ ಅದೆಷ್ಟೋ ಯುವತಿಯರ ಬಾಳು ನರಕವಾಗುತ್ತಿದೆ.