ಝಾನ್ಸಿ(ಉತ್ತರಪ್ರದೇಶ) :ತನ್ನ ಗಂಡ ಹೀಗಿರಬೇಕು, ಹಾಗಿರಬೇಕು ಅಂಥ ಈಗಿನ ಯುವತಿಯರು ಕನಸು ಕಾಣೋದು ಸಹಜ. ಅದರಲ್ಲಿ ಒಂದು ಹೆಚ್ಚು ಕಮ್ಮಿಯಾದರೂ ಮದುವೆಯನ್ನೇ ತಿರಸ್ಕರಿಸುವವರೂ ಉಂಟು. ಆದರೆ, ಇಲ್ಲೊಬ್ಬ ಯುವತಿಯ ಮದುವೆಯನ್ನು ನೋಡಿದರೆ ಅಚ್ಚರಿಯಾಗೋದು ಪಕ್ಕಾ. ಆಕೆ ವರಿಸಿರುವ ಗಂಡು ಬೇರಾರೂ ಅಲ್ಲ ಸಾಕ್ಷಾತ್ ಆ ಪರಿಶಿವನೇ..!
ಇದೇನಪ್ಪಾ ವಿಚಿತ್ರ ಅಂತೀರಾ? ನಿಜ, ಉತ್ತರಪ್ರದೇಶದ ಝಾನ್ಸಿ ನಗರದ ನಿವಾಸಿಯಾದ ಗೋಲ್ಡಿ ಎಂಬ ಯುವತಿಯೇ ಈ ಅಚ್ಚರಿ ಮದುವೆಯ ಮಧುವಣಗಿತ್ತಿ. ಈಕೆ ಮದುವೆಯಾಗಿದ್ದು ಶಿವಲಿಂಗವನ್ನು. ಶಿವನನ್ನೇ ತನ್ನ ಪತಿಯೆಂದು ಆಕೆ ಸ್ವೀಕರಿಸಿದ್ದಾಳೆ. ಈ ವಿಚಿತ್ರ, ವಿಶೇಷ ಮದುವೆ ಈಗ ಚರ್ಚಾ ವಿಷಯವಾಗಿದೆ.
ಏನಿದು ಶಿವ- ಗೋಲ್ಡಿ ವಿವಾಹೋತ್ಸವ:ಈ ವಿವಾಹ ಜುಲೈ 23(ಭಾನುವಾರ) ರಂದು ನಡೆದಿದೆ. ಹೆತ್ತವರು, ಬಂಧು ಬಾಂಧವರ ಸಮ್ಮುಖದಲ್ಲಿ ಎಲ್ಲ ವಿವಾಹಗಳಂತೆಯೇ ಅದ್ಧೂರಿಯಾಗಿ ನಡೆದಿದೆ. ಶಿವಲಿಂಗ ಮತ್ತು ಯುವತಿಯನ್ನು ರಥದ ಮೇಲೆ ಬೀದಿ ಉದ್ದಕ್ಕೂ ಮೆರವಣಿಗೆ ಮಾಡಲಾಗಿದೆ. ಜನರು ಅಕ್ಷತೆ ಹಾಕಿ ಆಶೀರ್ವದಿಸಿದ್ದಾರೆ.
ಆಧ್ಯಾತ್ಮಿಕ ಸಂಘಟನೆಯಾದ ಬ್ರಹ್ಮಕುಮಾರಿ ಜೊತೆಗೆ ಒಡನಾಟ ಹೊಂದಿದ್ದ ಗೋಲ್ಡಿ ಶಿವನ ಮೇಲೆ ಅಪಾರ ಭಕ್ತಿ, ಪ್ರೇಮಿ ಬೆಳೆಸಿಕೊಂಡಿದ್ದಳು. ಚಿಕ್ಕಂದಿನಿಂದಲೂ ಶಿವನ ಆರಾಧಕಳಾಗಿದ್ದ ಈಕೆ, ಇಂತಹ ಪತಿಯೇ ಬೇಕೆಂಬ ಆಸೆಯನ್ನು ಬೆಳೆಸಿಕೊಂಡಿದ್ದಳು. ವಯಸ್ಸಿಗೆ ಬಂದಿರುವ ಈಕೆಗೆ ವಿವಾಹವಾಗಲು ಪೋಷಕರು ಹೇಳಿದಾಗ ತಾನು ನರರೂಪದ ಮಾನವನ ಬದಲಾಗಿ ತನ್ನ ಇಚ್ಛಾರಾಧಕ ಶಿವನನ್ನು ವರಿಸುವುದಾಗಿ ತನ್ನ ಮನದ ಇಂಗಿತವನ್ನು ಹೇಳಿಕೊಂಡಳು.