ಝಾನ್ಸಿ( ಉತ್ತರಪ್ರದೇಶ): ಜಿಲ್ಲೆಯ ಬಯೋಡಾ ಗ್ರಾಮದಲ್ಲಿ ಆಯೋಜಿಸಿದ್ದ ತ್ರಯೋದಶಿಯಲ್ಲಿ ಆಹಾರ ಸೇವಿಸಿದ 1000 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ. ತಕ್ಷಣಕ್ಕೆ ಇವರನ್ನು ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರ ಸ್ಥಿತಿಯ ರೋಗಿಗಳನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಪ್ರಮುಖ ಕಾರಣ ಆಹಾರದಲ್ಲಿ ಯಾರೋ ವಿಷ ಕಲಬೆರಕೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ತನಿಖೆಗೆ ಒತ್ತಾಯಿಸಲಾಗಿದೆ.
ಏನಿದು ಪ್ರಕರಣ?:ಅಕ್ಟೋಬರ್ 27ರಂದು ಬರೋಡಾ ಗ್ರಾಮ ಪಂಚಾಯತ್ ಮಾಜಿ ಮುಖ್ಯಸ್ಥ ಲಖನ್ ಸಿಂಗ್ ರಜಪೂತ್ ಅವರ ನಿವಾಸದಲ್ಲಿ ತ್ರಯೋದಶಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಹಾರ ಸೇವಿಸಿದ್ದ 2000ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ, ಅತಿಸಾರ ಕಾಣಿಸಿಕೊಂಡಿದೆ. ಈ ವಿಷಯ ಆ ಬಳಿಕ ಕಾಳ್ಗಿಚ್ಚಿನಂತೆ ಹರಡಿದೆ. ಈ ಕುರಿತು ಮಾತನಾಡಿರುವ ಗ್ರಾಮ ಪಂಚಾಯತ್ ಮಾಜಿ ಮುಖ್ಯಸ್ಥ ಪ್ರಕರಣದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಸ್ವಸ್ಥರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಅನಾರೋಗ್ಯಕ್ಕೆ ಈಡಾದವರನ್ನು ಗ್ವಾಲಿಯರ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಝಾನ್ಸಿ ವೈದ್ಯಕೀಯ ಕಾಲೇಜು ಕೂಡ ರೋಗಿಗಳಿಂದ ಭರ್ತಿಯಾಗಿದೆ. ಜೊತೆಗೆ ಸಿಎಚ್ಸಿಯಲ್ಲೂ ಕೂಡ ಹಲವು ರೋಗಿಗಳನ್ನು ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಮಾಹಿತಿ ಪಡೆದ ಎಸ್‌ಡಿಎಂ ಮನೋಜ್‌ಕುಮಾರ್ ಸರೋಜ್, ವೈದ್ಯಕೀಯ ಅಧೀಕ್ಷಕ ಮಾತಾ ಪ್ರಸಾದ್ ರಜಪೂತ್, ಆಸ್ಪತ್ರೆಗೆ ಆಗಮಿಸಿ ರೋಗಿಗಳ ಸ್ಥಿತಿ ವಿಚಾರಿಸಿದ್ದು, ಗ್ರಾಮದಲ್ಲಿ ಕೂಡ ತನಿಖೆಗೆ ಮುಂದಾಗಿದ್ದಾರೆ.