ನವದೆಹಲಿ: ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ವಿಶ್ವ ಹಿಂದೂ ಪರಿಷತ್ ದೇಣಿಗೆ ಸಂಗ್ರಹ ಕಾರ್ಯಕ್ಕಾಗಿ ಭರದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆ ವಿಹೆಚ್ಪಿ ತನ್ನ ಬಹುತೇಕ ಎಲ್ಲ ಸಭೆಗಳನ್ನು ಪೂರ್ಣಗೊಳಿಸಿದ್ದು, ನಿಧಿ ಸಂಗ್ರಹ ಗುರಿಯನ್ನು 13 ಕೋಟಿ ಕುಟುಂಬ ಹಾಗೂ 5.25 ಲಕ್ಷ ಹಳ್ಳಿಗಳಿಗೆ ವಿಸ್ತರಿಸಿದೆ.
ಇದಕ್ಕೂ ಮೊದಲು ವಿಹೆಚ್ಪಿಯ ಕಾರ್ಯನಿರತ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ 4 ಲಕ್ಷ ಹಳ್ಳಿ ಹಾಗೂ 11 ಕೋಟಿ ಕುಟುಂಬಗಳಿಂದ ನಿಧಿ ಸಂಗ್ರಹ ಗುರಿ ಹೊಂದಿರುವುದಾಗಿ ತಿಳಿಸಿದ್ದರು.
ಈ ಕಾರ್ಯ ಜನವರಿ 15 2021ರಂದು ಆರಂಭಗೊಳ್ಳಲಿದ್ದು, ಮುಂದುವರಿದು ಫೆಬ್ರವರಿ 27ರ ವರೆಗೆ ನಡೆಯಲಿದೆ. 70 ಎಕರೆಯ ದೇವಾಲಯ ವಿಸ್ತೀರ್ಣವನ್ನು 108 ಎಕರೆಗೆ ಹೆಚ್ಚಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ದೇವಾಲಯದ ಕಟ್ಟಡ ನಿರ್ಮಾಣ ಸಮಿತಿ ಮಂಗಳವಾರ ಸಭೆ ಸೇರಿ ದೇವಾಲಯದ ಅಡಿಪಾಯದ ತಂತ್ರಜ್ಞಾನ ಮತ್ತು ವಿನ್ಯಾಸವನ್ನು ಅಂತಿಮಗೊಳಿಸಿದೆ. ಇದಲ್ಲದೇ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಯಾರಾದರೂ 20 ಸಾವಿರಕ್ಕಿಂತಲೂ ಹೆಚ್ಚಿನ ಹಣ ನೀಡುವವರಿದ್ದರೆ ಚೆಕ್ ಮೂಲಕ ನೀಡುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ:ರಾಮ ಮಂದಿರ ನಿರ್ಮಾಣಕ್ಕೆ ಬರೋಬ್ಬರಿ__ಕೋಟಿ ಬೇಕಂತೆ: ಅಂದಾಜು ಮಾಡಿದ ಟ್ರಸ್ಟ್