ಸಾಗರ್(ಮಧ್ಯಪ್ರದೇಶ): ಮುಪ್ಪಿನ ಕಾಲ ಹಾಗೂ ಇತರ ಸಂದರ್ಭಗಳಲ್ಲಿ ಸಹಾಯ ಆಗುವ ಉದ್ದೇಶದಿಂದ ಕೋಟ್ಯಂತರ ಜನರು ಅಂಚೆ ಕಚೇರಿಯಲ್ಲಿ ಉಳಿತಾಯ ಠೇವಣಿ ಇಡುತ್ತಾರೆ. ಆದರೆ, ಇಲ್ಲೋರ್ವ ಪೋಸ್ಟ್ಮಾಸ್ಟರ್ ಆ ಹಣಕ್ಕೆ ಕನ್ನ ಹಾಕಿ, ಐಪಿಎಲ್ ಬೆಟ್ಟಿಂಗ್ ಆಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿನಾ ಎಂಬಲ್ಲಿ ಅಂಚೆ ಕಚೇರಿ ಸಿಬ್ಬಂದಿ ಈ ಮೋಸ ಮಾಡಿದ್ದು, ಪೋಸ್ಟ್ ಆಫೀಸ್ನಲ್ಲಿ ಅನೇಕರು ಠೇವಣಿ ಮಾಡಿದ್ದ ಹಣ ತೆಗೆದು ಬೆಟ್ಟಿಂಗ್ ಆಡಿದ್ದಾನೆ. ಇದರ ಬೆನ್ನಲ್ಲೇ ಠೇವಣಿ ಕಳೆದುಕೊಂಡ ಗ್ರಾಹಕರು ಗೋಳಾಡುತ್ತಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ವಿಶಾಲ್ ಅಹಿರ್ವಾಲ್ ಎಂಬಾತನ ಬಂಧನ ಮಾಡಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬರೋಬ್ಬರಿ 24 ಕುಟುಂಬಗಳಿಗೆ ಆತ 1.25 ಕೋಟಿ ರೂಪಾಯಿ ಮೋಸ ಮಾಡಿದ್ದಾನೆ.