ಗುವಾಹಟಿ (ಅಸ್ಸೋಂ): ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ನಡೆದ ಅತಿ ದೊಡ್ಡ ಮಾದಕ ದ್ರವ್ಯ ದಂಧೆ ವಿರುದ್ಧ ಕಾರ್ಯಾಚರಣೆಯಲ್ಲಿ 100 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಮಾದರಿಯ ನಿಷಿದ್ಧ ವಸ್ತುಗಳನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ. ರಾಜ್ಯದ ದಕ್ಷಿಣ ತುದಿಯಲ್ಲಿರುವ ಕರೀಮ್‌ಗಂಜ್ ಜಿಲ್ಲೆಯಲ್ಲಿ ಈ ಭಾರಿ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ನಾಲ್ವರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸೋಂ ಪೊಲೀಸರ ವಿಶೇಷ ಕಾರ್ಯಪಡೆ ಮತ್ತು ಕರೀಂಗಂಜ್ ಜಿಲ್ಲಾ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಾದಕ ದ್ರವ್ಯಗಳನ್ನು ಮಿಜೋರಾಂನಿಂದ ಅಸ್ಸೋಂಗೆ ಸಾಗಾಟ ಮಾಡಲಾಗಿದ್ದು, ಬಂಧಿತ ನಾಲ್ವರಲ್ಲಿ ಮೂವರು ಆರೋಪಿಗಳು ಅದೇ ರಾಜ್ಯಕ್ಕೆ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ, ಪೂರ್ವ ಭಾರತದಲ್ಲೇ ಬಹುಶಃ ಅತಿ ದೊಡ್ಡ ಮಾದಕವಸ್ತು ಜಪ್ತಿ ಇದಾಗಿದೆ. ಜಪ್ತಿ ಮಾಡಲಾದ ಡ್ರಗ್ಸ್ ಮಾರುಕಟ್ಟೆಯಲ್ಲಿ ಕನಿಷ್ಠ 100 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಎಸ್‌ಟಿಎಫ್ ಉಪ ಮಹಾನಿರೀಕ್ಷಕ (ಡಿಐಜಿ) ಪಾರ್ಥಸಾರಥಿ ಮಹಂತ ತಿಳಿಸಿದ್ದಾರೆ. ಇದೇ ವೇಳೆ, ಅಸ್ಸೋಂ ಪೊಲೀಸರು ನಿರಂತರ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗಳು ಮತ್ತು ಕಠಿಣ ಕ್ರಮಗಳು ಕೈಗೊಳ್ಳುತ್ತಿದ್ದಾರೆ ಎಂದರು.
ಇಂದಿನ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ವಿವರಣೆ ನೀಡಿದ ಅವರು, ಮಿಜೋರಾಂನಿಂದ ಡ್ರಗ್ಸ್ ಸಾಗಣೆಯ ಬಗ್ಗೆ ನಮಗೆ ಮಾಹಿತಿ ಸಿಕ್ಕಿತ್ತು. ಅದರಂತೆಯೇ ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ. ಮಧ್ಯಾಹ್ನ 2.15ರ ಸುಮಾರಿಗೆ ಕರೀಮ್‌ಗಂಜ್ ಜಿಲ್ಲೆಯ ನಿಲಂಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಪ್ರಕಂಡಿಯಲ್ಲಿ ಮಿಜೋರಾಂ ನೋಂದಣಿ ಫಲಕವನ್ನು ಹೊಂದಿರುವ ಕಾರೊಂದನ್ನು ನಿಲ್ಲಿಸಿ ತಪಾಸಣೆ ನಡೆಸಲಾಯಿತು. ಆಗ 5.1 ಕೆಜಿ ಹೆರಾಯಿನ್, 64,000 ಯಾಬಾ ಮಾತ್ರೆಗಳು ಮತ್ತು ನಾಲ್ಕು ಪ್ಯಾಕೆಟ್ ವಿದೇಶಿ ಸಿಗರೇಟ್‌ಗಳನ್ನು ಪತ್ತೆ ಹಚ್ಚಲಾಗಿದೆ. ಕಾರಿನ ಸೈಡ್ ಬಾಡಿ ಪ್ಯಾನೆಲ್‌ಗಳಲ್ಲಿ ಇವುಗಳನ್ನು ಬಚ್ಚಿತ್ತು ಸಾಗಿಸಲಾಗಿತ್ತು ಎಂದು ತಿಳಿಸಿದರು.
ಅಲ್ಲದೇ, ನಾಲ್ವರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮಿಜೋರಾಂ ಮೂಲದ ಮಹಿಳೆಯೂ ಸೇರಿದ್ದಾರೆ. ಈಕೆ ಇತರ ಇಬ್ಬರೊಂದಿಗೆ ಮಿಜೋರಾಂನ ಥೆನ್ಜಾಲ್‌ನಿಂದ ಬಂದಿದ್ದಾಳೆ. ಆದರೆ, ನಾಲ್ಕನೇ ಆರೋಪಿ ಕರೀಮ್‌ಗಂಜ್ ನಿವಾಸಿಯಾಗಿದ್ದಾನೆ ಎಂದು ಡಿಐಜಿ ಮಹಂತ ಹೇಳಿದರು. ಮತ್ತೊಂದೆಡೆ, ಪೊಲೀಸರ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶ್ಲಾಘಿಸಿದ್ದಾರೆ. ಇದು ರಾಜ್ಯದ ಅತಿದೊಡ್ಡ ಡ್ರಗ್ಸ್ ಕಾರ್ಯಾಚರಣೆ ಎಂದು ಸಿಎಂ ಸಾಮಾಜಿಕ ಜಾಲತಾಣ 'ಎಕ್ಸ್' ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಜ್ಞಾನೇಂದ್ರ ಪ್ರತಾಪ್ ಸಿಂಗ್, ಮಾದಕ ದ್ರವ್ಯ ಮುಕ್ತ ಅಸ್ಸೋಂನ ನಿಮ್ಮ ಸಂಕಲ್ಪವನ್ನು ಈಡೇರಿಸುವ ನಮ್ಮ ಬದ್ಧತೆ ಅಚಲವಾಗಿದೆ ಎಂದು ಮರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:10ನೇ ತರಗತಿ ವಿದ್ಯಾರ್ಥಿ ಹತ್ತಿರ ಗಾಂಜಾ ಪತ್ತೆ: 6ನೇ ತರಗತಿ ವಿದ್ಯಾರ್ಥಿಗಳ ಬಳಿಯೂ ಸಿಕ್ತು ಡ್ರಗ್ಸ್!