ನವದೆಹಲಿ: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದು, ವಾಂಗ್ ಯೀ ಭಾರತಕ್ಕೆ ಭೇಟಿ ನೀಡುವ ಕುರಿತು ಸಿದ್ಧತೆಗಳು ನಡೆಯುತ್ತಿವೆ ಎಂಬುದಾಗಿ ತಿಳಿದು ಬಂದಿದೆ. ಆದರೆ, ದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವಾಲಯು ಈ ಭೇಟಿಯ ಕುರಿತು ಅಧಿಕೃತವಾಗಿ ದೃಢಪಡಿಸಿಲ್ಲ.
2020ರ ಮೇ ತಿಂಗಳಲ್ಲಿ ಸಂಭವಿಸಿದ ಗಲ್ವಾನ್ ಘರ್ಷಣೆ ಗಡಿ ವಿವಾದ ಪ್ರಾರಂಭವಾದ ನಂತರ ಎರಡೂ ದೇಶಗಳ ನಾಯಕರು ಮೊದಲ ಬಾರಿಗೆ ಮುಖಾಮುಖಿಯಾಗಿ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಗಲ್ವಾನ್ ಘರ್ಷಣೆಯ ನಂತರ ಸ್ಥಗಿತಗೊಂಡಿರುವ ಭಾರತ ಹಾಗೂ ಚೀನಾದ ದೈಹಿಕ ಭೇಟಿಯನ್ನು ಮತ್ತೆ ಪ್ರಾರಂಭಿಸುವುದು ಮತ್ತು ಈ ವರ್ಷದ ಕೊನೆಯಲ್ಲಿ ಬೀಜಿಂಗ್ನಲ್ಲಿ ನಡೆಯಲಿರುವ ಬ್ರಿಕ್ಸ್ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಪ್ರಮುಖ ಉದ್ದೇಶ ಇಟ್ಟುಕೊಂಡು ವಾಂಗ್ ಯೀ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ಗಲ್ವಾನ್ ಕಣಿವೆ ಕಾಳಗದ ಬಳಿಕ ಹಲವು ಸುತ್ತಿನ ಮಾತುಕತೆ:ಅನೇಕ ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಚರ್ಚೆಗಳು ನಡೆದರೂ, ಭಾರತ-ಚೀನಾದ ಗಡಿ ವಿವಾದ ಸಮಸ್ಯೆ ಇನ್ನೂ ಮುಂದುವರೆದಿದೆ. ಪೂರ್ವ ಲಡಾಖ್‌ನ ಎಲ್ಲ ಘರ್ಷಣಾ ಕೇಂದ್ರಗಳನ್ನು ಸಂಪೂರ್ಣ ಬಿಡುಗಡೆಗೊಳಿಸಲು ಭಾರತ ಕರೆ ನೀಡಿದೆ. ಇದಕ್ಕೂ ಮೊದಲು, ಭಾರತ ಮತ್ತು ಚೀನಾ ನಡುವೆ ಮಾರ್ಚ್ 11ರಂದು 15ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಭಾರತದ ಕಡೆಯ ಚುಶುಲ್-ಮೊಲ್ಡೊ ಗಡಿಯ ಮೀಟಿಂಗ್ ಪಾಂಯಿಂಟ್ನಲ್ಲಿ ನಡೆದಿದೆ.