ನವದೆಹಲಿ:'ಏಕ್ ಭಾರತ್ ಶ್ರೇಷ್ಠ ಭಾರತ್' ಆಚರಣೆಯ ಭಾಗವಾಗಿ ಇನ್ಮುಂದೆ ದೇಶಾದ್ಯಂತ ಎಲ್ಲ ರಾಜ್ಯಗಳು ಬೇರೆ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಗೆ ಮುಂದಾಗಿವೆ. ಇದೇ ಮೊದಲ ಬಾರಿಗೆ ಆಯಾ ರಾಜ್ಯಗಳ ರಾಜಭವನಗಳು ಇತರ ರಾಜ್ಯಗಳ ಸಂಸ್ಥಾಪನಾ ದಿನದ ನಿಮಿತ್ತ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಉಪಕ್ರಮದ ಭಾಗವಾಗಿ ಮೇ 1ರಂದು ಮಹಾರಾಷ್ಟ್ರ ಮತ್ತು ಗುಜರಾತ್ನ ಸಂಸ್ಥಾಪನಾ ದಿನವನ್ನು ದೇಶಾದ್ಯಂತ ಎಲ್ಲ ರಾಜಭವನಗಳಲ್ಲಿ ಆಚರಿಸಲಾಗುತ್ತಿದೆ. 20 ರಾಜ್ಯಗಳು ಮತ್ತು ಎಲ್ಲ ಎಂಟು ಕೇಂದ್ರಾಡಳಿತ ಪ್ರದೇಶಗಳು ಸಹ ಈ ಎರಡೂ ರಾಜ್ಯಗಳ ದಿನಾಚರಣೆಗಳನ್ನು ತಮ್ಮ-ತಮ್ಮ ರಾಜಭವನ (ಗವರ್ನರ್ ಹೌಸ್) ಮತ್ತು ರಾಜ್ ನಿವಾಸ್ (ಲೆಫ್ಟಿನೆಂಟ್ ಗವರ್ನರ್ ನಿವಾಸ)ನಲ್ಲಿ ಸೋಮವಾರ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ದೃಢಪಡಿಸಿವೆ. ಬಹುತೇಕ ಎಲ್ಲ ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ:ಮನ್ ಕಿ ಬಾತ್ ದೇಶದ ಕೋಟ್ಯಂತರ ಜನರ ಧ್ವನಿ: ಪ್ರಧಾನಿ ಮೋದಿ
ಅಲ್ಲದೇ, ಆಯಾ ರಾಜ್ಯದಲ್ಲಿ ವಾಸಿಸುವ ಮಹಾರಾಷ್ಟ್ರ ಮತ್ತು ಗುಜರಾತಿ ಮೂಲದ ಜನರಿಗೆ ರಾಜಭವನಗಳು ಆತಿಥ್ಯ ನೀಡಲಿವೆ. ರಾಜ್ಯಗಳ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅಡುಗೆ ಪದ್ಧತಿಗಳನ್ನು ಎತ್ತಿ ಹಿಡಿಯಲು ವಿಭಿನ್ನ ಕಾರ್ಯಕ್ರಮಗಳನ್ನೂ ಆಯೋಜಿಸಲಿವೆ. ಆಹ್ವಾನಿತರು ಮತ್ತು ಗಣ್ಯರು ಆಯಾ ರಾಜ್ಯಗಳ ಸಾಂಪ್ರದಾಯಿಕ ಉಡುಪುಗಳಲ್ಲಿ ಪಾಲ್ಗೊಳ್ಳಲಿದ್ದಾರೆ.