ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಓರ್ವ ಉಗ್ರನ ಮನೆಯನ್ನು ಶನಿವಾರ ಪೊಲೀಸರು ಧ್ವಂಸಗೊಳಿಸಿದ್ದಾರೆ. ಕಾಶ್ಮೀರದ ಇತಿಹಾಸದಲ್ಲೇ ಉಗ್ರನೊಬ್ಬನ ಮನೆಯನ್ನು ಧ್ವಂಸಗೊಳಿಸಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಉಗ್ರಗಾಮಿ ಆಶಿಕ್ ನೆಂಗ್ರೋ ಎಂಬುವವನಿಗೆ ಸೇರಿದ ಎರಡಂತಸ್ತಿನ ಮನೆಯನ್ನು ಬುಲ್ಡೋಜರ್‌ನಿಂದ ನೆಲಸಮಗೊಳಿಸಲಾಗಿದೆ. ಈ ಮನೆಯನ್ನು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಕಂದಾಯ ಇಲಾಖೆ ತಿಳಿಸಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜಪುರ ಪ್ರದೇಶದಲ್ಲಿ ಉಗ್ರ ಆಶಿಕ್ ನೆಂಗ್ರೋ ಮನೆ ಇತ್ತು. ಜೈಷ್ ಇ ಮೊಹಮ್ಮದ್ (ಜೆಇಎಂ) ಕಮಾಂಡರ್ ಆಗಿದ್ದ ನೆಂಗ್ರೋ ಪುಲ್ವಾಮಾ ಆತ್ಮಾಹುತಿ ದಾಳಿಯ ಆರೋಪಿಯಾಗಿದ್ದಾನೆ. 2019ರ ಫೆಬ್ರವರಿ 14ರಂದು ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಹುತ್ಮಾತರಾಗಿದ್ದರು.
ಅಲ್ಲದೇ, ಸೆಪ್ಟೆಂಬರ್ 2019ರಲ್ಲಿ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಗಡಿಯುದ್ದಕ್ಕೂ ಲಖನ್‌ಪುರದಲ್ಲಿ ಟ್ರಕ್‌ನಿಂದ 6 ಎಕೆ ಸರಣಿಯ ಗನ್‌ಗಳು ಜಪ್ತಿ ಮತ್ತು ಡ್ರೋನ್ ಹಾರಾಟದ ಘಟನೆಗೂ ಈ ಉಗ್ರ ನಂಟು ಹೊಂದಿದ್ದಾನೆ. ಜೊತೆಗೆ 2013ರಲ್ಲಿ ಪುಲ್ವಾಮಾದಲ್ಲಿ ಒಬ್ಬ ಪೊಲೀಸ್ ಮತ್ತು ನಾಗರಿಕನ ಹತ್ಯೆ ಆರೋಪವೂ ಈತನ ಮೇಲಿದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಎರಡು ಸೇನಾ ವಾಹನಗಳ ನಡುವೆ ಅಪಘಾತ